ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ-ಸಾವಿನ ಸಂಖ್ಯೆ ೧೧ಕ್ಕೆ ಏರಿಕೆ

ಭೂಪಾಲ್, ಫೆ. ೬: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗರ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ ಮತ್ತು ೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹರ್ದಾ ನಗರದಿಂದ ೨ ಕಿ.ಮೀ. ದೂರದಲ್ಲಿರುವ ಮಗರ್ಧ ರೋಡ್ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಸುಮಾರು ೧೧ ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಬೆಂಕಿಯ ಕೆನ್ನಾಲಗೆ ಕಾರ್ಖಾನೆ ಒಳಗೆ ಹಾಗೂ ಹೊರಗೆ ವ್ಯಾಪಿಸಿದ್ದು, ಪ್ರದೇಶದ ಸುಮಾರು ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಕುಟುಂಬಕ್ಕೆ ತಲಾ ೨ ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ ೫೦,೦೦೦ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪ್ರತಿಭಟನೆಗೆ ಭಾಗವಹಿಸುವಂತೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಫೆ. ೬: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿAದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಧರಣಿಯಲ್ಲಿ ಭಾಗವಹಿಸುವಂತೆ ರಾಜ್ಯದ ಕೇಂದ್ರ ಸಚಿವರು, ಸಂಸದರು ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪತ್ರ ಬರೆದಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡ, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಡಿ.ವಿ. ಸದಾನಂದಗೌಡ ಸೇರಿದಂತೆ ದೆಹಲಿಯಲ್ಲಿ ನಾಡನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಗೌರವಾನ್ವಿತರಿಗೆ ನಡೆಯಲಿರುವ ದಿಲ್ಲಿ ಚಲೋದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಎಲ್‌ಇಟಿ ಉಗ್ರನ ಬಂಧನ

ನವದೆಹಲಿ, ಫೆ. ೬: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಗ್ರ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು. ಗಡಿ ನಿಯಂತ್ರಣ ರೇಖೆಯಿಂದ(ಎಲ್‌ಒಸಿ) ಶಸ್ತಾçಸ್ತç ಮತ್ತು ಮದ್ದುಗುಂಡುಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆರೋಪಿಯನ್ನು ಕುಪ್ವಾರಾ ಜಿಲ್ಲೆಯ ರಿಯಾಜ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದ್ದು, ಆತನನ್ನು ಭಾನುವಾರ ದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ, ಎಲ್‌ಒಸಿಯಲ್ಲಿ ಉಗ್ರರಿಂದ ಶಸ್ತಾçಸ್ತç ಮತ್ತು ಮದ್ದುಗುಂಡುಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖುರ್ಷೀದ್ ಅಹ್ಮದ್ ರಾಥರ್ ಮತ್ತು ಗುಲಾಮ್ ಸರ್ವರ್ ಜೊತೆಗೆ ಸಂಚು ರೂಪಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ಆರೋಪ - ಭಾರತ ಹಾಕಿ ತಂಡದ ಆಟಗಾರ ವಿರುದ್ಧ ಎಫ್.ಐ.ಆರ್.

ಬೆಂಗಳೂರು, ಫೆ. ೬: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದೆ ಆರೋಪದ ಮೇರೆಗೆ ಭಾರತ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ವಂಚನೆ ಮಾಡಿದ ಆರೋಪದಡಿ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ಅವರ ವಿರುದ್ದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ೨೦೧೯ರಲ್ಲಿ ಸಂತ್ರಸ್ತ ಯುವತಿಗೆ ೧೭ ವರ್ಷ ಇರುವಾಗಲೇ ಆರೋಪಿ ವರುಣ್ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದ ಮೂಲಕ ಹಾಕಿ ಆಟಗಾರ ವರುಣ್ ಕುಮಾರ್ ಸಂತ್ರಸ್ತ ಯುವತಿಗೆ ಪರಿಚಯವಾಗಿದ್ದರು. ಈ ಸಮಯದಲ್ಲಿ ಯುವತಿಯು ೧೭ ವರ್ಷದವಳಾಗಿದ್ದಳು. ಯುವತಿಯ ಜತೆಗೆ ಸ್ನೇಹಿತನಾದ ವರುಣ್ ಕುಮಾರ್ ಬಳಿಕ ಆಕೆಯನ್ನು ಪ್ರೀತಿಸುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಗೋವುಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು, ಫೆ. ೬: ಹಾಲು ಉತ್ಪಾದಕರಿಗೆ ಬಾಕಿ ಇರುವ ಸಬ್ಸಿಡಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಇಂದು ತಮ್ಮ ಗೋವುಗಳೊಂದಿಗೆ ನಗರದ ಫ್ರೀಡಂ ಪಾರ್ಕ್ಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಅನ್ನದಾತರಿಗೆ ಟೋಪಿ ಹಾಕಿರುವ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರುಗಳಿಗೂ ಶಾಕ್ ನೀಡುತ್ತದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬಿತ್ಯಾದಿ ಕಲರ್ ಕಲರ್ ಹೂವುಗಳನ್ನು ಕಿವಿ ಮೇಲೆ ಇಟ್ಟು ಅಧಿಕಾರಕ್ಕೆ ಬಂದು, ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನೂ ಹೆಚ್ಚಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದರು.