(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪ, ಫೆ. ೭: ಕೊಡಗಿನ ಪ್ರತಿಷ್ಠಿತ ಗ್ರಾಮ ಪಂಚಾಯಿತಿಗಳ ಲ್ಲೊಂದಾದ ವಾಣಿಜ್ಯ ನಗರಿ ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಗೆ ವಾಸ್ತು ದೋಷ ಕಾಡುತ್ತಿದೆ. ದೋಷದ ನಿವಾರಣೆಗೆ ಇದೀಗ ನೂತನವಾಗಿ ಕಿಟಕಿ ಯೊಂದನ್ನು ಅಳವಡಿಸಲಾಗಿದೆ. ಸೂರ್ಯನ ಬೆಳಕು ಅಧ್ಯಕ್ಷರ ಕೊಠಡಿಗೆ ನೇರವಾಗಿ ಬರುವ ಹಿನ್ನೆಲೆಯಲ್ಲಿ ದೊಡ್ಡದಾದ ಕಿಟಕಿಯೊಂದನ್ನು ಇಡಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸುಮಾರು ೨೫ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಬೃಹತ್ ಕಟ್ಟಡದಲ್ಲಿ ಅಧಿಕಾರಿಗಳಿಗೆ ಸೇರಿದಂತೆ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರು ಕುಳಿತುಕೊಳ್ಳುವ ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು ಕುಳಿತುಕೊಳ್ಳುವ ಕೊಠಡಿಯ ಪೂರ್ವ ದಿಕ್ಕಿನಲ್ಲಿ ಗೋಡೆ ನಿರ್ಮಾಣವಾಗಿತ್ತು. ಇದೀಗ ಇದೇ ಪೂರ್ವ ದಿಕ್ಕಿನ ಗೋಡೆಯನ್ನು ಕೊರೆದು ದೊಡ್ಡದಾದ ಕಬ್ಬಿಣದ ಕಿಟಕಿಯನ್ನು ಅಳವಡಿಸಲಾಗಿದೆ. ಇದರಿಂದ ಸೂರ್ಯನ ಕಿರಣಗಳು ಅಧ್ಯಕ್ಷರ ಕೊಠಡಿಗೆ ಬೀಳುತ್ತಿವೆ.
ಜ.೨೯ರಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ೨ನೇ ಅವಧಿಯ
(ಮೊದಲ ಪುಟದಿಂದ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೂ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ಎಂ.ಮAಜುಳನವರು ಆಯ್ಕೆಯಾಗಿದ್ದರು.
ಅಧ್ಯಕ್ಷರಾಗಿ ನೇಮಕಗೊಂಡ ನಂತರ ೧೦ ದಿನ ಕಳೆದರೂ ಅಧ್ಯಕ್ಷರು ತಮ್ಮ ಅಧ್ಯಕ್ಷರ ಕೊಠಡಿಗೆ ತೆರಳಿ ಅಧಿಕಾರವನ್ನು ಸ್ವೀಕರಿಸಲಿಲ್ಲ. ಅಧ್ಯಕ್ಷರ ಕೊಠಡಿಯಲ್ಲಿ ವಾಸ್ತುದೋಷದ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇನ್ನೂ ಕೂಡ ಅಧಿಕೃತವಾಗಿ ಅಧ್ಯಕ್ಷರ ಕೊಠಡಿಯನ್ನು ಪ್ರವೇಶಿಸಿಲ್ಲ. ಕಚೇರಿಗೆ ಆಗಮಿಸುವ ಸಾರ್ವಜನಿಕರ ಅಹವಾಲುಗಳನ್ನು ಕಚೇರಿಯ ಆವರಣದಲ್ಲಿಯೇ ನೂತನ ಅಧ್ಯಕ್ಷರು ಕುಳಿತುಕೊಂಡು ಪರಿಹಾರ ನೀಡುತ್ತಿದ್ದಾರೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ೨೧ ಸದಸ್ಯರ ಸಂಖ್ಯಾಬಲವಿದ್ದು ೧೨ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದರು. ೯ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ದಿನದಿಂದ ದಿನಕ್ಕೆ ಶರವೇಗದಲ್ಲಿ ಅಭಿವೃದ್ಧಿ ಕಾಣುತ್ತಿವೆ. ನಗರದಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ವಹಿವಾಟುಗಳು, ವ್ಯಾಪಾರಗಳು ನಡೆಯುತ್ತಿವೆ.