ಕೂಡಿಗೆ, ಫೆ. ೭: ಶಿಕ್ಷಕರು ಮಕ್ಕಳಿಗೆ ಗಣಿತ ಕಲಿಕೆಯನ್ನು ಕಬ್ಬಿಣದ ಕಡಲೆ ಎಂಬ ಮನೋಭಾವನೆಯನ್ನು ದೂರ ಮಾಡಿ ಗಣಿತ ವಿಷಯವು ಸಂತಸದ ಕಲಿಕೆಯಾಗುವಂತೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಪ್ರಾಯೋಗಿಕವಾಗಿ ಗಣಿತ ಕಲಿಕೆಯ ಅಭ್ಯಾಸದ ಅಗತ್ಯವಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಹೇಳಿದರು.

ಜಿಲ್ಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಮನುಜನ್ ಗಣಿತ ಕ್ಲಬ್ ಸಹಯೋಗದೊಂದಿಗೆ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರಪೇಟೆ ತಾಲೂಕು ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಗಣಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣಿತ ಅಭ್ಯಾಸವು ಮಕ್ಕಳಿಗೆ ಸಂತಸದ ಕಲಿಕೆಯಾದರೆ ಸುಲಭದ ಕಲಿಕೆಯಾಗುತ್ತದೆ ಎಂದರು.

ಇAತಹ ಕಾರ್ಯಕ್ರಮಗಳು ಗಣಿತ ಕ್ಲಿಷ್ಟವಾದ ವಿಷಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಸುಲಭ ವಿಧಾನಗಳ ಮೂಲಕ ಗಣಿತ ಕಲಿತರೆ ಇದು ಇನ್ನಷ್ಟು ಸರಳವಾಗುತ್ತದೆ. ಶಿಕ್ಷಕರು ಸಹ ಸುಲಭ ವಿಧಾನಗಳ ಮೂಲಕ ಗಣಿತ ಬೋಧಿಸಬೇಕು. ಹೊಸ ಕೌಶಲ ಮತ್ತು ಕ್ರಿಯಾಶೀಲ ವಿಧಾನಗಳ ಮೂಲಕ ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿಕೊಡಬೇಕು.

ಶಾಲೆಯ ಫಲಿತಾಂಶವು ಗಣಿತ ವಿಷಯದ ಫಲಿತಾಂಶವನ್ನು ಅವಲಂಬಿಸಿರುವುದರಿAದ ಗಣಿತ ಶಿಕ್ಷಕರು ಮಕ್ಕಳಿಗೆ ಚಟುವಟಿಕೆಯಾಧಾರಿತ ಕಲಿಕೆಗೆ ಹೆಚ್ಚಿನ ಗಮನಹರಿಸಬೇಕು ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮಕ್ಕಳು ಗಣಿತ ಕಲಿಕೆಯು ಸುಲಭದ ಕಲಿಕೆ ಎಂಬ ಪರಿಕಲ್ಪನೆಯೊಂದಿಗೆ ಗಣಿತವನ್ನು ಕಲಿಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ನಿರಂತರ ಕಲಿಕೆಯಲ್ಲಿ ತೊಡಗಿದರೆ ಖಂಡಿತವಾಗಿಯೂ ಗಣಿತ ಕಲಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಿದಾಗ ಮಕ್ಕಳಿಂದ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯ. ಈ ದಿಸೆಯಲ್ಲಿ ಇಂತಹ ತರಬೇತಿಗಳು ಸಹಕಾರಿಯಾಗಿವೆ ಎಂದರು.

ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಿರುವುದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದರು. ಮಕ್ಕಳಲ್ಲಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಂ.ಮೋಹನ್ ಮಾತನಾಡಿದರು.

ದೃಖ್ ಶ್ರಾವ್ಯದ ವೀಡಿಯೋ ಹಾಗೂ ಪಿ.ಪಿ.ಟಿ. ಮೂಲಕ ಮಾಹಿತಿ ನೀಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎಂ. ಹೇಮಂತ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಎಂ. ಜವರಯ್ಯ, ಅಂಜೆಲಾ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥೆ ವೀಣಾ ವಿಜಯ, ಎಸ್.ಎಸ್.ಎಲ್.ಸಿ. ಪರೀಕ್ಷಾ ತಾಲೂಕು ನೋಡಲ್ ಅಧಿಕಾರಿ ಕೆ.ಬಿ. ರಾಧಾಕೃಷ್ಣ, ಸಿ.ಆರ್.ಪಿ. ಕೆ. ಶಾಂತಕುಮಾರ್, ಶಿಕ್ಷಣ ಸಂಯೋಜಕ ಹೆಚ್.ಆರ್. ಶೇಖರ್ ಇದ್ದರು. ತರಬೇತಿಯಲ್ಲಿ ತಾಲೂಕಿನ ಪ್ರೌಢಶಾಲಾ ಗಣಿತ ಶಿಕ್ಷಕರು ಭಾಗವಹಿಸಿದ್ದರು.