ಕಣಿವೆ, ಫೆ. ೫: ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೇರೂರು ಗಿರಿಜನರ ಗೋಳು ಕೇಳುವವರೇ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ.
ಗಿರಿಜನ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಇಲಾಖೆ ಜಿಲ್ಲಾಡಳಿತದ ನಿರ್ಲಕ್ಷö್ಯ ಇವರ ನರಕಯಾತನೆಗೆ ಕಾರಣವಾಗಿದೆ.
ಮಕ್ಕಳಿಗೆ ಚರ್ಮ ರೋಗ : ಈ ಹಾಡಿಯಲ್ಲಿ ವಾಸವಿರುವ ಮಕ್ಕಳಿಗೆ ಚರ್ಮರೋಗ ಬಾಧಿಸಿದ್ದು ದೇಹದ ಸುತ್ತೆಲ್ಲಾ ಸಣ್ಣ ಸಣ್ಣ ಗಂಟುಗಳ ಮಾದರಿಯಲ್ಲಿ ಬೊಕ್ಕೆಗಳು ಎದ್ದಿವೆ. ಅವುಗಳ ಕಡಿತಕ್ಕೆ ಕೆರೆದು ಕೆರೆದು ದೇಹಕ್ಕೆಲ್ಲಾ ಹರಡಿದ್ದು ಇದರ ನೋವು ಸಹಿಸದ ಮಕ್ಕಳು ಹೈರಾಣಾಗಿ ಹೋಗಿದ್ದಾರೆ.
ಹಾಡಿಯಲ್ಲಿ ವಾಸವಿರುವ ಮೂವರು ಮಕ್ಕಳಿಗೆ ಈ ರೀತಿಯ ಚರ್ಮ ಬಾಧೆ ಬಾಧಿಸಿದ್ದು, ಆಸ್ಪತ್ರೆಗೆ ತೆರಳಿ ಸಾವಿರಾರು ರೂಗಳನ್ನು ವ್ಯಯಿಸಿದ್ದಾರೆ. ಗಿರಿಜನರ ಆರೋಗ್ಯ ರಕ್ಷಣೆಗೆ ಇರುವಂತಹ ಸಂಚಾರಿ ಆರೋಗ್ಯ ಸೇವೆ ಈ ಹಾಡಿಗೆ ಲಭ್ಯವಾಗುತ್ತಿಲ್ಲ.
ವಾರಕ್ಕೆರಡು ದಿನ ಕುಡಿಯುವ ನೀರು : ಈ ಹಾಡಿಯಲ್ಲಿ ವಾಸವಿರುವ ನಮಗೆ ಸ್ಥಳೀಯ ಗ್ರಾಮ ಪಂಚಾಯಿತಿ ವಾರಕ್ಕೆ ಎರಡೇ ಎರಡು ದಿನ ಮಾತ್ರ ಅಂದರೆ ಭಾನುವಾರ ಹಾಗೂ ಬುಧವಾರ ಕುಡಿಯುವ ನೀರು ಪೂರೈಸುತ್ತಿದೆ.
ನೀರು ಬಿಡುವ ದಿವಸ ನಾವು ಕೂಲಿಗೆ ಹೋಗದೇ ನೀರನ್ನು ಕಾದು ಗುಡಿಸಲೊಳಗೆ ನೀರು ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ನೀರಿಗಾಗಿ ಎರಡು ಕಿಮೀ ದೂರದ ಹಾರಂಗಿ ಹೊಳೆಯೇ ಗತಿ ಎನ್ನುತ್ತಾರೆ ಹಾಡಿಯ ವಾಸಿ ಲಲಿತಾ ಹಾಗೂ ಗಿರಿಜ.
ಪ್ಲಾಸ್ಟಿಕ್ ಹೊದಿಕೆಗಳು ಇಲ್ಲದ ಸೂರೇ ಇಲ್ಲ : ಈ ಹಾಡಿಯಲ್ಲಿ ವಾಸವಿರುವ ಬಹುತೇಕ ಗಿರಿಜನ ವಾಸಿಗಳಿಗೆ ಸುಸಜ್ಜಿತ ಮನೆಗಳೇ ಇಲ್ಲ. ಅಂದರೆ ಸಂಬAಧಿಸಿದ ಗಿರಿಜನ ಕಲ್ಯಾಣ ಇಲಾಖೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಈಗ ಇಲ್ಲಿ ವಾಸವಿರುವ ನಿವಾಸಿಗಳ ಅಜ್ಜನ ಕಾಲದಲ್ಲಿ ಅಂದಿನ ಜಿಲ್ಲಾಡಳಿತ ನಿರ್ಮಿಸಿದ್ದ ಸೂರುಗಳು ಇಂದು ಸಂಪೂರ್ಣ ಹರುಕು ಮುರುಕಾಗಿವೆ. ಇಂತಹ ಹರಕು ಮುರುಕಾದ ಸೂರುಗಳ ಮೇಲೆ ಕೂಲಿಯ ಹಣವನ್ನು ತೆತ್ತು ತಂದ ಪ್ಲಾಸ್ಟಿಕ್ ಹೊದಿಕೆ ಹಾಸಿ ಈ ಮಂದಿ ಸಂಕಷ್ಟದ ಜೀವನ ನಡೆಸುತ್ತಿದ್ದರೂ ಕೂಡ ಇದೂವರೆಗೂ ಯಾವೊಂದು ಇಲಾಖೆಯು ಕೊನೆ ಪಕ್ಷ ಪ್ಲಾಸ್ಟಿಕ್ ಖರೀದಿಸಲು ನಯಾ ಪೈಸೆ ಹಣ ಕೊಟ್ಟಿಲ್ಲ ಎಂದು ಇಲ್ಲಿನ ವಾಸಿಗಳಾದ ಮುತ್ತಪ್ಪ, ವಿಜಯ ವಿವರಿಸುತ್ತಾರೆ.
ಸ್ನಾನಕ್ಕೂ ಪ್ಲಾಸ್ಟಿಕ್ ಮರೆ : ಮಹಿಳೆಯರು ಸ್ನಾನ ಮಾಡಲು ತಮಗಿರುವ ಕಿಷ್ಕಿಂದೆಯAತಹ ಗುಡಿಸಲುಗಳಲ್ಲಿ ಸೂಕ್ತ ಸ್ಥಳಾವಕಾಶವಿಲ್ಲದ ಕಾರಣ ಅಲ್ಲೇ ಗುಡಿಸಲಿನ ಆಸುಪಾಸಿನಲ್ಲಿ ಸುತ್ತಲೂ ಪ್ಲಾಸ್ಟಿಕ್ ಮರೆ ಮಾಚಿಕೊಂಡೇ ಸ್ನಾನದ ಗೂಡು ಮಾಡಿಕೊಂಡು ಬವಣೆಯ ಬದುಕು ನಡೆಸುತ್ತಿದ್ದಾರೆ.
ಸ್ವಚ್ಛತೆ ಕಾಣದ ಚರಂಡಿ : ಈ ಹಾಡಿಯಲ್ಲಿ ಬಹಳ ವರ್ಷಗಳ ಹಿಂದೆ ಅಳವಡಿಸಿರುವ ಚರಂಡಿಯೊಳಗೆ ಮಣ್ಣು ಹಾಗೂ ತ್ಯಾಜ್ಯ ತುಂಬಿದ್ದು ಸ್ವಚ್ಛ ಮಾಡದ ಕಾರಣ ಇಲ್ಲಿನ ಮಂದಿ ಸ್ನಾನಕ್ಕೆ ಬಳಸುವ ತ್ಯಾಜ್ಯ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಇನ್ನಾದರೂ ಈ ಹಾಡಿಯತ್ತ ಗಮನ ಹರಿಸುವ ಮೂಲಕ ಹಾಡಿಯ ಅಮಾಯಕ ಶ್ರಮಿಕ ಮಂದಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕಿದೆ.ಬಯಲು ಶೌಚಾಲಯ : ಈ ಹಾಡಿಯಲ್ಲಿರುವ ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಎಲ್ಲರೂ ಕೂಡ ಶೌಚಕ್ಕೆ ಕಾಡನ್ನೇ ಅವಲಂಬಿಸಿದ್ದಾರೆ. ವಾಸಕ್ಕೆ ಸರಿಯಾದ ಮನೆಗಳೇ ಇಲ್ಲದಿರುವಾಗ ಇನ್ನು ಶೌಚಾಲಯ ಎಲ್ಲಿ ಕಟ್ಟಿಕೊಡುತ್ತಾರೆ ಎಂದು ಪ್ರಶ್ನಿಸುವ ಇಲ್ಲಿನ ಮಂದಿ ಕಾಡಾನೆಗಳ ನಿತ್ಯದ ಹಾವಳಿಯ ಭೀತಿಯ ನಡುವೆಯೂ ಕಾಡನ್ನೇ ಅವಲಂಬಿಸಿ ನಿಸರ್ಗ ಕರೆ ಮುಗಿಸಿಕೊಳ್ಳುತ್ತಿದ್ದಾರೆ.
ಅನುದಾನದ ಕೊರತೆ ಅಪೂರ್ಣ ಮನೆಗಳು : ‘ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬ ಗಾದೆಯಂತೆ ಹಾಡಿಯಲ್ಲಿನ ವಸತಿ ವಂಚಿತ ಬಹುತೇಕ ಮಂದಿ ಇದ್ದಾಗ್ಯೂ ಎಲ್ಲೋ ಒಂದೆರಡು ಮಂದಿಗೆ ನಿರ್ಮಿಸುತ್ತಿರುವ ಮನೆಗಳಿಗೆ ಅನುದಾನ ಸರಿಯಾಗಿ ಬಿಡುಗಡೆಯಾಗದ ಕಾರಣ ಅರ್ಧಕ್ಕೆ ನಿಂತಿವೆ. ಒಟ್ಟಾರೆ ಕೊಡಗು ಜಿಲ್ಲಾಡಳಿತ ‘ಜಿಲ್ಲಾಡಳಿತದ ನಡಿಗೆ ಗಿರಿಜನ ಹಾಡಿಗಳೆಡೆಗೆ’ ಎಂಬ ಯೋಜನೆಯನ್ನು ರೂಪಿಸುವ ಮೂಲಕ ಜಿಲ್ಲೆಯಲ್ಲಿನ ಗಿರಿಜನ ಹಾಡಿಗಳ ಮಂದಿ ಎದುರಿಸುತ್ತಿರುವ ಘನಘೋರ ಸಮಸ್ಯೆಗಳನ್ನು ನಿವಾರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅಷ್ಟಕ್ಕೂ ಬಹು ಮುಖ್ಯವಾಗಿ ಇಲ್ಲಿನ ಪ್ರೌಢಾವಸ್ಥೆಯಲ್ಲಿರುವ ಹೆಣ್ಣುಮಕ್ಕಳ ವೈಯಕ್ತಿಕ ಸ್ವಚ್ಛತೆಗೆ ಅಗತ್ಯವಿರುವ ಪರಿಕರಗಳನ್ನು ಉಚಿತವಾಗಿ ನೀಡುವ ಮೂಲಕ ಆರೋಗ್ಯದ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.
-ಕೆ. ಎಸ್. ಮೂರ್ತಿ