ಮಡಿಕೇರಿ, ಫೆ. ೫: ಕಂದಾಯ ಇಲಾಖೆಗೆ ವೇಗ ನೀಡುವುದು ಹಾಗೂ ಸರಕಾರಿ ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಪರಿಣಾಮಕಾರಿ ಕ್ರಮವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಕಚೇರಿಗೆ ಅಲೆದಾಟ ತಪ್ಪಿಸುವ ಉದ್ದೇಶದಿಂದ ಪರಿಹಾರ ಕ್ರಮಕೈಗೊಳ್ಳಲಾಗುತ್ತಿದೆ. ತಹಶೀಲ್ದಾರ್ ಕೋರ್ಟ್ನಲ್ಲಿರುವ ವ್ಯಾಜ್ಯ ೩ ತಿಂಗಳಿನಲ್ಲಿ ಬಗೆಹರಿಯಬೇಕು. ಆದರೆ, ೮-೯ ತಿಂಗಳು ಬಗೆಹರಿಯುತ್ತಿರಲಿಲ್ಲ. ಇದೀಗ ಸಕಾಲದಲ್ಲಿ ಪರಿಹಾರವಾಗುತ್ತಿದೆ. ಇದೇ ರೀತಿ ವಿವಿಧ ಹಂತದ ನ್ಯಾಯಾಲಯದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಚುರುಕು ಮುಟ್ಟಿಸಿ ಕೆಲಸ ಮಾಡಿಸಲಾಗುತ್ತಿದೆ. ಮೊದಲು ಎ.ಸಿ. ಕೋರ್ಟ್ನಲ್ಲಿ ೬೦ ಸಾವಿರ ಕೇಸ್ ಪರಿಹಾರವಾಗದೆ ಉಳಿದಿತ್ತು. ಮೊದಲಿದ್ದವರು ಯಾಕೆ ಪರಿಹರಿಸಿಲ್ಲ. ಬೇಜವಾಬ್ದಾರಿತನದ ಅವ್ಯವಸ್ಥೆ ಆಗಿದೆ. ಅದನ್ನು ಪರಿಹರಿಸುವ ಕೆಲಸವಾಗುತ್ತಿದೆ. ಕಂದಾಯ ಇಲಾಖೆಯ ೨೦-೩೦ ವರ್ಷದ ಸಮಸ್ಯೆ ಪರಿಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.