ಕಣಿವೆ, ಫೆ. ೬: ತಾ.೬ ರಂದು ‘ಶಕ್ತಿ’ಯಲ್ಲಿ ಪ್ರಕಟವಾದ ಹೆರೂರು ಗಿರಿಜನ ಹಾಡಿಯ ದುರವಸ್ಥೆ ಕುರಿತ ವರದಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡ ಹೆರೂರು ಹಾಡಿಗೆ ಭೇಟಿ ನೀಡಿ ಅಲ್ಲಿನ ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ನಡೆಸಿತು.
ಹಾಗೆಯೇ ಗಿರಿಜನ ಕುಟುಂಬಗಳ ಮಕ್ಕಳು ಕಲಿಯುವ ಸ್ಥಳೀಯ ಸರ್ಕಾರಿ ಶಾಲೆಗೂ ಭೇಟಿ ನೀಡಿ ಮಕ್ಕಳ ಆರೋಗ್ಯದ ಕುರಿತು ಶಾಲಾ ಶಿಕ್ಷಕರು ಹಾಗೂ ಮಕ್ಕಳ ಪೋಷಕರಿಂದ ಮಾಹಿತಿ ಪಡೆಯಿತು.
ಹಾಡಿಯಲ್ಲಿ ಅಪೂರ್ಣ ಗೊಂಡಿರುವ ಮನೆಗಳಿಗೆ ಬಾಕಿ ಇರುವ ಬಿಲ್ ಪಾವತಿಸಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು.
ಮನೆಗಳಿಲ್ಲದೇ ಪ್ಲಾಸ್ಟಿಕ್ ಹೊದಿಕೆಯ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಗಿರಿಜನ ಕುಟುಂಬಗಳ ಮಾಹಿತಿಯನ್ನು ಕಲೆ ಹಾಕಿದ ತಂಡ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ನಿವಾಸಿಗಳಿಗೆ ಮಾಹಿತಿ ನೀಡಿದರು.
ಗಿರಿಜನ ಹಾಡಿಗಳಿಗೆ ಖುದ್ದಾಗಿ ತೆರಳಿ ಅವರ ಆರೋಗ್ಯ ಪರಿಶೀಲಿಸಿ ಅಗತ್ಯ ಔಷಧಿ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದ ಗಿರಿಜನ ಸಂಚಾರಿ ಆರೋಗ್ಯ ಸೇವೆ ಸ್ಥಗಿತಗೊಂಡು ಎಂಟು ತಿಂಗಳಾಗಿವೆ. ಹಾಗಾಗಿ ಗಿರಿಜನ ಹಾಡಿಯಲ್ಲಿನ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬವಾಗಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ತಿಳಿಸಿದ ಜಿಲ್ಲಾ ಗಿರಿಜನ ಅಧಿಕಾರಿ ಹೊನ್ನೇಗೌಡ, ಮತ್ತೆ ಸರ್ಕಾರ ಸಂಚಾರಿ ಆರೋಗ್ಯ ಸೇವೆಯನ್ನು ಶೀಘ್ರದಲ್ಲಿಯೇ ಆರಂಭಗೊಳಿಸುವ ಬಗ್ಗೆಯೂ ಮಾಹಿತಿ ನೀಡಿದರು.
ಗಿರಿಜನ ಮಂದಿಗೆ ಕುಡಿಯುವ ಶುದ್ಧ ನೀರನ್ನು ಪೂರೈಸುವ ಜವಾಬ್ದಾರಿ ಸ್ಥಳೀಯ ನಾಕೂರು ಶಿರಂಗಾಲ ಗ್ರಾಮ ಪಂಚಾ ಯಿತಿಯದ್ದಾಗಿದೆ. ಆದಾಗ್ಯೂ ಸಂಬAಧಿಸಿದ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ಗಮನ ವಹಿಸಲು ಕೋರುವುದಾಗಿ ಹೊನ್ನೇಗೌಡ ತಿಳಿಸಿದರು. ತಾಲೂಕು ಸಹಾಯಕ ನಿರ್ದೇಶಕ ಸಿದ್ದೇಗೌಡ, ಬಸವನಹಳ್ಳಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರವಿ ಇದ್ದರು.
ವರದಿ : ಕೆ.ಎಸ್.ಮೂರ್ತಿ