ಮಡಿಕೇರಿ, ಫೆ. ೪: ಗಾಂಜಾದಿAದ ಬೇರ್ಪಡಿಸಿ ತೆಗೆಯಲಾದ ಹ್ಯಾಶಿಷ್ ಆಯಿಲ್ ಎಂಬ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಮೂವರು ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ೧೦ ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟಿಸುವುದರ ಜೊತೆಗೆ ತಲಾ ರೂ. ೧ ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಕೇರಳ ರಾಜ್ಯದ ಕಾಸರಗೋಡು ಮೂಲದ ಅಹಮ್ಮದ್ ಕಬೀರ್ (೩೭), ಅಬ್ದುಲ್ ಖಾದರ್ (೩೭), ಮಹಮ್ಮದ್ ಮುಜಮಿಲ್ (೩೭) ಶಿಕ್ಷೆಗೆ ಒಳಗಾದ ಅಪರಾಧಿಗಳು.
ತಾ. ೨೯-೮-೨೦೨೨ ರಂದು ಭಾಗಮಂಡಲ-ಮಡಿಕೇರಿ ರಸ್ತೆಯಲ್ಲಿರುವ ಐ.ಬಿ. ಜಂಕ್ಷನ್ ಸಮೀಪ ಕೆಎಲ್-೩೩-ಎಫ್-೬೮೨೫ ಸಂಖ್ಯೆ ಮಾರುತಿ ಸೆಲೇರಿಯೋ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಹ್ಯಾಶಿಷ್ ಆಯಿಲ್ ಅನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಭಾಗಮಂಡಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು ೧ ಕೆಜಿ ೧೬೦ ಗ್ರಾಂ ತೂಕದ ಹ್ಯಾಶಿಷ್ ಆಯಿಲ್ನ್ನು ವಶಪಡಿಸಿಕೊಂಡು ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿ ಪಿ.ಎಸ್.ಐ. ಪ್ರಿಯಾಂಕ, ಎ.ಎಸ್.ಐ. ಬೆಳ್ಳಿಯ್ಯಪ್ಪ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳ ವಿರುದ್ಧ ತಾ. ೨೧-೧೧-೨೦೨೨ ರಂದು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಾ. ೧ ರಂದು ಮೂವರು ಅಪರಾಧಿಗಳಿಗೆ ೧೦ ವರ್ಷ ಕಠಿಣ ಜೈಲು ಶಿಕ್ಷೆ, ಪ್ರತಿ ಆರೋಪಿಗೆ ತಲಾ ರೂ. ೧ ಲಕ್ಷ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ೩ ವರ್ಷ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಸರಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿ ವಾದ ಮಂಡಿಸಿದರು.