ವೀರಾಜಪೇಟೆ, ಫೆ. ೪: ವೀರಾಜಪೇಟೆ ಮೊರಾರ್ಜಿ ವಸತಿ ಶಾಲೆಯ ಹಲವು ಸಮಸ್ಯೆಗಳ ಬಗ್ಗೆ ಮಕ್ಕಳ ಪೋಷಕರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೀರಾಜಪೇಟೆ ಬಡ ಮತ್ತು ನಿರ್ಗತಿಕರ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಬೇಕು ಎಂಬ ಚಿಂತನೆಯಿAದ ವಸತಿಶಾಲೆ ಕ್ರಮ ಜಾರಿಗೆ ತರಲಾಗಿದೆ. ಆದರೆ ಆಡಳಿತ ವರ್ಗದ ದರ್ಪ, ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಶುಚಿತ್ವವಿಲ್ಲದ ಶಾಲಾ ಆವರಣ ಸಮಸ್ಯೆಗಳ ಮುಕ್ತಿಗಾಗಿ ವಸತಿ ಶಾಲೆಯ ಮಕ್ಕಳ ಪೋಷಕರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿ ಅಳಲನ್ನು ತೊಡಿಕೊಂಡರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇಲ್ಲಿನ ಅಧಿಕಾರಿಗಳು ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪ್ರಾಂಶುಪಾಲರ ದರ್ಪದ ನಡತೆಯ ಬಗ್ಗೆ ಬೆಂಗಳೂರು ನಿವಾಸಿ ವಸತಿ ಶಾಲೆಯ ವಿದ್ಯಾರ್ಥಿಯ ಪೋಷಕರಾದ ಡೆಲ್ಫಿನಾ ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿಗಳಾದ ಎಲ್. ನಾರಾಯಣ ಸ್ವಾಮಿ ಅವರಿಗೆ ದೂರು ಆರ್ಜಿ ಸಲ್ಲಿಸಿದರು. ದೂರು ಅರ್ಜಿ ಸ್ವೀಕರಿಸಿದ ಅಧ್ಯಕ್ಷರು ತಕ್ಷಣವೇ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಸ್ಥಳದಲ್ಲಿ ಇಲ್ಲದ ಕಾರಣ ತಮ್ಮ ಆಪ್ತ ಕಾರ್ಯದರ್ಶಿಗಳಾದ ಅರುಣ್ ಪೂಜಾರ್ ಅವರನ್ನು ವಸತಿ ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಆದೇಶ ಮಾಡಿದರು. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿ ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ನಾನು ಬೆಂಗಳೂರು ನಿವಾಸಿಯಾಗಿದ್ದು ನನ್ನ ಮಗ ವಸತಿ ಶಾಲೆಯಲ್ಲಿ ೮ ನೇ ತರಗತಿ ವಿದ್ಯಾರ್ಥಿಯಾಗಿದ್ದು ಕೆಲವು ತಿಂಗಳ ಹಿಂದೆ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ಮಗನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ದೇಹಕ್ಕೆ ಪೆನ್ಸಿಲ್‌ನಿಂದ ಚುಚ್ಚಿ ನೋವು ಮಾಡಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಂದ ದೌರ್ಜನ್ಯ ನಡೆದರೂ ವಾರ್ಡನ್ ಮತ್ತು ಪ್ರಾಂಶುಪಾಲರು ಮೌನವಹಿಸಿದ್ದಾರೆ. ಹಲವು ಬಾರಿ ಆಡಳಿತ ಮಂಡಳಿಯ ಮೇಲೆ ಮೇಲಾಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಉಪಯೋಗವಾಗಲಿಲ್ಲ. ದೂರದ ಊರುಗಳಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರಕಲೆಂದು ವಸತಿ ಶಾಲೆಯಲ್ಲಿ ದಾಖಲು ಮಾಡಿದ್ದೇವೆ ಇಂತಹ ಘಟನೆಗಳಿಂದ ಮಕ್ಕಳಿಗೆ ಭದ್ರತೆ ಇಲ್ಲದಾಗಿದೆ. ಸೂಕ್ತ ತನಿಖೆಗೆ ಮುಂದಾಗಿ ನ್ಯಾಯ ಒದಗಿಸಿ ಎಂದು ಪೋಷಕಾರದ ಡೆಲ್ಫಿನಾ ಮನವಿ ಮಾಡಿದರು.

ವಸತಿ ಶಾಲೆ ಎಂಬುದು ಕೇವಲ ಹೆಸರಿಗೆ ಮಾತ್ರವಾಗಿದೆ. ನಾನು ಶಾಲಾ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದೇನೆ. ಪೋಷಕರ ಒತ್ತಡದ ಮೇರೆಗೆ ದಿನಾಂಕ ೧೮ ರಂದು ಸಭೆ ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಪೋಷಕರು ವಸತಿ, ಶಾಲಾ ಆವರಣ, ಅಡುಗೆ ಕೋಣೆ ಮತ್ತು ಶೌಚ ಗೃಹಗÀಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಸಮಸ್ಯೆ ಕಂಡು ಬಂದಿವೆ. ಶಾಲೆಯಲ್ಲಿ ಎಫ್.ಡಿ.ಎ ಬಸವರಾಜು ಗೌಡ ಎಂಬುವವರು ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ.

ವಾರ್ಡನ್ ಬದಲಾವಣೆ ಮಾಡುವಂತೆ ವಿದ್ಯಾರ್ಥಿಗಳಿಂದ ದೂರು ಅರ್ಜಿಗೆ ಸಹಿ ಹಾಕುವ ಸಂಧರ್ಭ ಶಾಲೆಯ ಅಡುಗೆ ಸಹಾಯಕಿಯಿಂದ ವೀಡಿಯೋ ಚಿತ್ರೀಕರಣ ಮಾಡಿಸಿ ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಡಲಾಗಿದೆ ಎಂದು ಪೋಷಕರಾದ ಅಮ್ಮತ್ತಿ ಕಾರ್ಮಾಡುವಿನ ಜಗದೀಶ್ ಆರೋಪಿಸಿದರು. ವಿದ್ಯಾರ್ಥಿಗಳ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆಗೊಳಿಸುವಂತೆ ಒತ್ತಾಯ ಮಾಡಲಾಗಿತ್ತು. ನಂತರದಲ್ಲಿ ವರ್ಗಾವಣೆಗೊಂಡರು. ಅಡುಗೆ ಕೋಣೆಯಲ್ಲಿ ಇರಿಸಲಾಗಿದ್ದ ಗೋಧಿ ಹಿಟ್ಟು ಮತ್ತು ಬೇಳೆಗಳಲ್ಲಿ ಹುಳಉಪ್ಪಟಗಳಿದ್ದು ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿತ್ತು. ಅಡುಗೆ ಕೋಣೆಯ ಉಪಹಾರ ಮಾಡುವ ಸಭಾಂಗಣದಲ್ಲಿ ಹುಳಗಳು ತುಂಬಿ ತುಳುಕಿತ್ತು, ಹಲವು ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಿದ್ದರು. ಆವರಣವು ಶುಚಿತ್ವವಿಲ್ಲದೆ ಗಿಡ ಗಂಟಿಗಳಿAದ ಆವೃತ್ತವಾಗಿ ಸರೀಸೃಪಗಳ ತಾಣವಾಗಿ ಪರಿಣಮಿಸಿತ್ತು. ಶಾಲೆಯ ದುಸ್ಥಿತಿಗಳ ಬಗ್ಗೆ ಮುಖ್ಯ ಶಿಕ್ಷಕರಾದ ಮಮತ ಅವರಿಗೆ ದೂರು ನೀಡಿದರೂ ಯಾವುದೇ ಉತ್ತರ ದೊರೆತಿಲ್ಲ. ಪೋಷಕರ ಸಮಿತಿ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾದರೂ, ಅವರು ಕ್ರಮಕ್ಕೆ ಮುಂದಾಗಲಿಲ್ಲ. ಇದೀಗ ಕ್ರಮಕ್ಕಾಗಿ ಮಾನವ ಹಕ್ಕು ಆಯೋಗದ ಮುಂದೆ ದೂರು ನೀಡಿದ್ದೇವೆ ಎಂದು ಹೇಳಿದರು. ಪೊನ್ನಂಪೇಟೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಮೀತಾ ಕಾರ್ತಿಕ್ ಅವರೂ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಅರುಣ್ ಪೂಜಾರ್ ಮತ್ತು ಡಿವೈಎಸ್ಪಿ ಸುಧೀರ್ ಹೆಗ್ಡೆ ಜಿಲ್ಲಾ. ಬಿ.ಸಿ.ಎಂ. ಅಧಿಕಾರಿಗಳಾದ ದಿವಾಕರ್, ಉಪ ತಹಶೀಲ್ದಾರ್ ಪ್ರದೀಪ್ ಕುಮಾರ್, ವೀರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿಗಳಾದ ರವೀಂದ್ರ ಅವರುಗಳ ಸಮ್ಮುಖದಲ್ಲಿ ವಸತಿ ಶಾಲೆಯ ಆವರಣಗಳು, ಅಡುಗೆ ಕೋಣೆ, (ಬಾಲಕ ಮತ್ತು ಬಾಲಕಿಯರ) ವಸತಿ ನಿಲಯಗಳನ್ನು ಪರಿಶೀಲನೆ ಮಾಡಲಾಯಿತು. ಬಳಿಕ ವಸತಿ ಶಾಲೆಯ ಸಭಾಂಗಣದಲ್ಲಿ ಸಭೆ ನಡೆಸಿ, ಪೋಷಕರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಎಸ್ಪಿ ಸುಧೀರ್ ಹೆಗ್ಡೆ ಅವರು ಪೋಷಕರಾದ ಡೆಲ್ಫಿನಾ ಬೆಂಗಳೂರು ಮತ್ತು ಜಗದೀಶ್ ಅವರಿಂದ ಬಂದ ದೂರು ಅರ್ಜಿಗಳನ್ನು ಸ್ವೀಕರಿಸಿದರು. ನಂತರ ಇಲಾಖೆಯ ವತಿಯಿಂದ ವೀರಾಜಪೇಟೆ ನಗರ ಠಾಣೆಗೆ ಅರ್ಜಿಯನ್ನು ಸಲ್ಲಿಸಲಾಯಿತು.

-ಟಿ.ಜೆ. ಕಿಶೋರ್‌ಕುಮಾರ್ ಶೆಟ್ಟಿ