ಮಡಿಕೇರಿ, ಫೆ. ೪: ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನ ಮಾಚಂಗಡ ಶಿಶಿರ್ ತಮ್ಮಯ್ಯ ಅವರು ಇದೀಗ ಭೂಸೇನೆಯಲ್ಲಿ ಬ್ರಿಗೇಡಿಯರ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ಶಿಶಿರ್ ತಮ್ಮಯ್ಯ (ಎಸ್.ಎಂ.) ಅವರು ನಿನ್ನೆ ಬ್ರಿಗೇಡಿಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಜಿಲ್ಲೆಯ ಹೆಮ್ಮೆಯ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರು ಪ್ರತಿನಿಧಿಸಿದ್ದ ಕುಮಾವ್ ರೆಜಿಮೆಂಟ್‌ನ ೫ನೇ ಬೆಟಾಲಿಯನ್‌ಗೆ ಸೇರುವ ಮೂಲಕ ತಮ್ಮ ಸೇನಾ ಜೀವನವನ್ನು ೧೯೯೮ರಿಂದ ಆರಂಭಿಸಿದರು. ಇಂಡೋನೇಷಿಯಾದಲ್ಲಿ ತಮ್ಮ ಸ್ಟಾಫ್ ಕಾಲೇಜ್ ತರಬೇತಿಯನ್ನು ಪಡೆದ ಇವರು ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆ (ಐಔಅ) ಮತ್ತು ಪಂಜಾಬ್‌ನಲ್ಲಿ ಅಂತರ ರಾಷ್ಟಿçÃಯ ಗಡಿರೇಖೆ ಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಡೆಹರಾಡೂನ್‌ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ ಹಾಗೂ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವೀಸ್‌ನ ಸ್ಟಾಫ್ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿರುವ ಶಿಶಿರ್ ತಮ್ಮಯ್ಯ ಇದೀಗ ಪಶ್ಚಿಮ ಗಡಿ ಪ್ರದೇಶದ ಬ್ರಿಗೇಡಿಯರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರು ಮೂಲತಃ ಜಿಲ್ಲೆಯ ಕೊಟ್ಟಗೇರಿ ನಿವಾಸಿ ಮಾಚಂಗಡ ದಿವಂಗತ ತಮ್ಮಯ್ಯ (ಶಾಂತ) ಹಾಗೂ ಮಣಿ (ತಾಮನೆ ಚೆಕ್ಕೇರ) ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ದಿವಿಕಾ ಹಾಗೂ ಪುತ್ರಿ ಅಯಾನಾ ಹಾಗೂ ಇಶಾನ್ ಚಂಗಪ್ಪ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ.