ಕೂಡಿಗೆ, ಫೆ. ೫: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹೆಬ್ಬಾಲೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾರ್ಚ್ ೨ ರಂದು ಜಾನಪದ ಗ್ರಾಮ ಸಿರಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಹೆಬ್ಬಾಲೆ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ೩ ಗ್ರಾಮದ ಪ್ರಮುಖರು, ಕಸಾಪ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಗ್ರಾಮ ಸಿರಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಿ ತೀರ್ಮಾನಿಸಿದರು.
ಒಂದು ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೮.೩೦ ಗಂಟೆಗೆ ಪೂರ್ಣಕುಂಭ ಕಳಶದೊಂದಿಗೆ ಅತಿಥಿಗಳನ್ನು ಎತ್ತಿನಗಾಡಿಯಲ್ಲಿ ವೇದಿಕೆಗೆ ಕರೆತರುವುದು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಸೇರಿದಂತೆ ೩ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಉದ್ಘಾಟಿಸುವುದು. ನಂತರ ಜಾನಪದ ಗೋಷ್ಠಿ, ಜಾನಪದ ಕ್ರೀಡಾ ಸ್ಪರ್ಧೆ, ಜಾನಪದ ನೃತ್ಯ, ಗೀತಗಾಯನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ನಿರ್ಧರಿಸಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತ್ತು. ಆರ್ಥಿಕ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಜಾನಪದ ಕ್ರೀಡಾ ಸಮಿತಿ, ವೇದಿಕೆ ಸಮಿತಿ, ಪ್ರಚಾರ ಸಮಿತಿ, ವಸ್ತುಪ್ರದರ್ಶನ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿ ಅಧ್ಯಕ್ಷರು, ಸಂಚಾಲಕರನ್ನು ನೇಮಿಸಲಾಯಿತು.
ಆರ್ಥಿಕ ಸಮಿತಿ ಅಧ್ಯಕ್ಷ ನಟೇಶ್ ಗೌಡ ಮಾತನಾಡಿ, ಫೆ.೧೦ ರ ಒಳಗೆ ಉಪ ಸಮಿತಿಗಳಿಗೆ ಬೇಕಾಗುವ ಅಂದಾಜು ಖರ್ಚು ವೆಚ್ಚಗಳ ಮಾಹಿತಿ ನೀಡಲು ತಿಳಿಸಿದರು.
ಸಭೆಯಲ್ಲಿ ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ, ತೊರೆನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಪ್ರಕಾಶ್, ಪ್ರಮುಖರಾದ ಟಿ.ಡಿ. ಸೋಮಣ್ಣ, ಕೃಷ್ಣೇಗೌಡ, ಟಿ.ಬಿ. ಜಗದೀಶ್, ಚಂದ್ರಶೇಖರ್, ಚಂದ್ರಪ್ಪ, ರೂಪ ಮಹೇಶ್, ಟಿ.ಎಲ್.ರಮೇಶ್, ಪ್ರದೀಪ್ ರೆಡ್ಡಿ, ಕಸಾಪ ತಾಲೂಕು ಕಾರ್ಯದರ್ಶಿ ಎಸ್.ನಾಗರಾಜ್, ಖಜಾಂಚಿ ಕೆ.ವಿ. ಉಮೇಶ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಕವಿತಾ ಪುಟ್ಟೇಗೌಡ, ಇತರರು ಹಾಜರಿದ್ದರು.