ಮಡಿಕೇರಿ, ಫೆ. ೩: ವನ್ಯಪ್ರಾಣಿಗಳಿಂದ ಮಾಡಿದ ವಸ್ತುಗಳು ಪರಂಪರಾಗತವಾಗಿ ಜಿಲ್ಲೆಯಲ್ಲಿ ಬಳಕೆ ಮಾಡುತ್ತಿದ್ದು, ಅದನ್ನು ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ತಲಾತಲಾಂತರಗಳಿAದ ಜಿಲ್ಲೆಯ ಜನರು ವಿಶೇಷವಾಗಿ ರೈತರು ವನ್ಯಪ್ರಾಣಿಗಳಿಂದ ತಯಾರಿಸಿದ ವಸ್ತುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ರವಾನಿಸಿದ್ದಾರೆ. ಇದನ್ನು ಚರಾಸ್ತಿ ಎಂದು ಕೂಡ ಪರಿಗಣಿಸಲಾಗಿದೆ. ಇದರೊಂದಿಗೆ ಭಾವನಾತ್ಮಕ ಸಂಬAಧ ಇದೆ. ಜಿಲ್ಲೆಯಲ್ಲಿ ಜಿಂಕೆ ಕೊಂಬುಗಳನ್ನು ಹಾಗೂ ಕೆಲವು ಕಾಡುಪ್ರಾಣಿಗಳ ವಸ್ತುಗಳನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಇದು ತಲಾತಲಾಂತರಗಳಿAದ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.

ವನ್ಯಪ್ರಾಣಿಗಳ ಹತ್ಯೆ ವಿರುದ್ಧ ಅರಣ್ಯ ಇಲಾಖೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಜಿಲ್ಲೆಯಲ್ಲಿ ಬಹಳ ಹಿಂದೆಯೇ ಪ್ರಾಣಿ ವಸ್ತುಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿದ್ದಾರೆ. ಪಾರಂಪರಿಕವಾಗಿ ಬಂದ ವಸ್ತುಗಳನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಜನರ ಭಾವನೆಗೆ ಬೆಲೆ ನೀಡಿ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.