ಸುಂಟಿಕೊಪ್ಪ, ಫೆ. ೩: ಇಲ್ಲಿನ ಗದ್ದೆಹಳ್ಳದ ಯಾಮಿಟಿ ಯುನೈಟೆಡ್ ಫುಬ್ಬಾಲ್ ಕ್ಲಬ್ ವತಿಯಿಂದ ೬ನೇ ವರ್ಷದ ಹೊನಲು ಬೆಳಕಿನ ೫+೨ ಕಾಲ್ಚೆಂಡು ಪಂದ್ಯಾಟ ಗದ್ದೆಹಳ್ಳದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಸುಮಾರು ೩೫ ತಂಡಗಳು ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡವು. ರಾತ್ರಿ ನಡೆದ ಫೈನಲ್ನಲ್ಲಿ ಗದ್ದೆಹಳ್ಳದ ಡಾಲ್ಫಿನ್ ಎಫ್ಸಿ ತಂಡ ಜಯಗಳಿಸಿ ನಗದು ೬೬,೬೬೬ ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಮಿಡ್ಸಿಟಿ ಎಫ್ಸಿ ತಂಡ ಪಡೆದು ಟ್ರೋಫಿ ಹಾಗೂ ೩೩,೩೩೩ ನಗದು ಬಹುಮಾನವನ್ನು ಪಡೆದುಕೊಂಡಿತು. ಯಾಮಿಟಿ ಯುನೈಟೆಡ್ ಫುಬ್ಬಾಲ್ ಕ್ಲಬ್ ವತಿಯಿಂದ ೬ನೇ ವರ್ಷದ ಹೊನಲು ಬೆಳಕಿನ ಪಂದ್ಯಾಟದ ಸಲುವಾಗಿ ಕೂರ್ಗ್ ಬ್ಲೆಡ್ ಡೊನರ್ಸ್ ಇವರಿಗೆ ಸುಮಾರು ೬೦ ಮಂದಿ ರಕ್ತದಾನ ಶಿಬಿರದಲ್ಲಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ಮಂಥರ್ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನೀಲ್ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ನಾಗರತ್ನ, ಸಮಾಜ ಸೇವಕರಾದ ರಶೀದ್, ಯಾಮಿಟಿ ಯುನೈಟೆಡ್ ಫುಬ್ಬಾಲ್ ಕ್ಲಬ್ ಅಧ್ಯಕ್ಷ ಕೆ.ವೈ. ಬಶೀರ್, ಎಂ.ವಿ. ರಶೀದ್, ಸಮಿತಿ ಸದಸ್ಯರು ಹಾಜರಿದ್ದರು. ಇದೇ ಸಂದರ್ಭ ಯುನಿವರ್ಸಿಟಿ ಸೌತ್ ಜೋನ್ ಪಂಜಾಬ್ ಎಂ.ಎಸ್. ಸಾದಿಕ್, ಮೊಹಮ್ಮದ್ ಉಸಾಮ ಇವರುಗಳನ್ನು ಸನ್ಮಾನಿಸಲಾಯಿತು. ಕಳೆದ ೬ ವರ್ಷಗಳಿಂದ ಪಂದ್ಯಾಟದಲ್ಲಿ ಉಳಿಕೆಯಾದ ಹಣವನ್ನು ನಾಡಿನ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಸಂಘದ ಅಧ್ಯಕ್ಷರು, ಸದಸ್ಯರು ತಿಳಿಸಿದರು.