ಗೋಣಿಕೊಪ್ಪಲು, ಫೆ. ೩: ಶಾಲಾ ಬಸ್‌ವೊಂದು ಹಿಂದಕ್ಕೆ ತೆಗೆಯುವ ವೇಳೆ ಜೀಪೊಂದು ಡಿಕ್ಕಿ ಪಡಿಸಿದ ಘಟನೆ ದ.ಕೊಡಗಿನ ಕಾನೂರು ಬಳಿ ವರದಿಯಾಗಿದೆ. ಅಪಾಯದಲ್ಲಿ ಸಿಲುಕಿದ್ದ ಜೀಪಿನಲ್ಲಿದ್ದ ಕಾರ್ಮಿಕರನ್ನು ಸಮಾಜಸೇವಕಿ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜುದೇವಯ್ಯ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮುಂಜಾನೆ ೭.೩೦ರ ಸುಮಾರಿಗೆ ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಗೆ ಸೇರಿದ ಬಸ್ ಕಾನೂರು ಬಳಿ ತೆರಳಿ ಅಲ್ಲಿನ ಜಂಕ್ಷನ್ ಬಳಿ ಬಸ್‌ಅನ್ನು ಹಿಂದಕ್ಕೆ ತಿರುಗಿಸುತ್ತಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಕಾರ್ಮಿಕರನ್ನು ಹೊತ್ತು ತರುತ್ತಿದ್ದ ಜೀಪ್ ಬಸ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿದೆ.

ಈ ಸಂದರ್ಭ ಜೀಪಿನಲ್ಲಿದ್ದ ೯ ಕಾರ್ಮಿಕರು ಗಾಯಗೊಂಡು ಚೀರಾಡುತ್ತಿದ್ದರು. ಇದೇ ವೇಳೆ ತಮ್ಮ ಜೀಪಿನಲ್ಲಿ ಕಾಫಿ ತೋಟಕ್ಕೆ ತೆರಳುತ್ತಿದ್ದ ಕೊಟ್ಟಂಗಡ ವಿಜುದೇವಯ್ಯ, ತಮ್ಮ ಜೀಪನ್ನು ಬದಿಗೆ ನಿಲ್ಲಿಸಿ ಅಪಘಾತ ಕ್ಕೀಡಾದ ಕಾರ್ಮಿಕರನ್ನು ಕರೆದೊಯ್ದು ಕಾನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸುತ್ತಮುತ್ತಲಿನಲ್ಲಿದ್ದ ಸಾರ್ವಜನಿಕರು ಬಂದರಾದರೂ ಯಾರೂ ಕೂಡ ಜೀಪಿನ ಬಳಿ ತೆರಳಿ ಅಪಘಾತ ಕ್ಕೀಡಾಗಿ ಕಷ್ಟದಲ್ಲಿದ್ದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಿಲ್ಲ. ಕೇವಲ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುವುದರಲ್ಲಿಯೇ ಬಹುತೇಕ ನಾಗರಿಕರು ಮಗ್ನರಾಗಿದ್ದರು.

ಇದನ್ನು ಕಂಡ ಕೊಟ್ಟಂಗಡ ವಿಜುದೇವಯ್ಯ ತಮ್ಮ ಜೀಪಿನಲ್ಲಿದ್ದ ಕಾರ್ಮಿಕರ ಸಹಾಯದಿಂದ ರಕ್ತದ ಮಡುವಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಸಫಲರಾದರು. ಕಾರ್ಮಿಕರ ಜೀಪಿನಲ್ಲಿದ್ದ ಕೆಲವು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತಕ್ಕೀಡಾದ ಜೀಪ್ ಸಂಪೂರ್ಣ ಜಖಂಗೊAಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಬಸ್‌ನ ಹಿಂಬದಿಯೂ ಜಖಂಗೊAಡಿದೆ. ಗಾಯಗೊಂಡ ಕಾರ್ಮಿಕರು ಕಾನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-ಹೆಚ್.ಕೆ. ಜಗದೀಶ್