ಸುಂಟಿಕೊಪ್ಪ, ಫೆ. ೩: ಸಮೀಪದ ಕೆದಕಲ್ ೭ನೇ ಮೈಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಶನಿವಾರ ನಡೆದ ದ್ವಿಚಕ್ರ ವಾಹನಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಮೈಸೂರು ಜಿಲ್ಲೆ ಹುಣಸೂರು ಮೂಲದ ನಿವಾಸಿ ಬಾಬು (೩೫) ಮೃತ ವ್ಯಕ್ತಿಯಾಗಿದ್ದು, ಮಡಿಕೇರಿ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿ ಚೇತನ್ (೨೦) ಗಂಭೀರ ಗಾಯಗೊಂಡ ಯುವಕ.

ಬಾಬು ತನ್ನ ಬೈಕ್‌ನಲ್ಲಿ (ಕೆ.ಎ.೪೫ ವೈ ೦೭೩೪) ಹುಣಸೂರಿನಿಂದ ಮಡಿಕೇರಿಗೆ ಬರುತ್ತಿದ್ದಾಗ ಚೇತನ್ (೨೦) ತನ್ನ ಬೈಕ್‌ನಲ್ಲಿ (ಕೆ.ಎ.೧೨ ಹೆಚ್ ೦೭೭೪) ಬೋಯಿಕೇರಿಯಿಂದ ಕುಶಾಲನಗರದ ಕಡೆ ತೆರಳುತ್ತಿದ್ದರು. ಇಬ್ಬರು ವೇಗವಾಗಿ ಬೈಕ್ ಚಾಲಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ನಡೆದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿ ಬಾಬು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಚೇತನ್‌ನನ್ನು ಸ್ಥಳೀಯರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಎರಡು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊAಡಿದೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಬಾಬುವಿನ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.