ಮಡಿಕೇರಿ, ಫೆ. ೩ : ನೇತಾಜಿ ಯುವಕ ಹಾಗೂ ಯವತಿ ಮಂಡಳಿ, ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಮತ್ತು ತಾಲೂಕು ಯುವ ಒಕ್ಕೂಟ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರö್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ೧೨೭ನೇ ಜನ್ಮ ದಿನಾಚರಣೆ ಹಾಗೂ ನೇತಾಜಿ ಯುವಕ ಹಾಗೂ ಯುವತಿ ಮಂಡಲದ ೩೨ನೇ ವಾರ್ಷಿಕೋತ್ಸವವನ್ನು ತಾಳತ್ತಮನೆಯ ಆಟದ ಮೈದಾನದಲ್ಲಿ ನಡೆಸಲಾಯಿತು. ಸ್ಥಳೀಯರಾದ ಬಿ.ಐ. ಕುಮಾರ್, ಛತ್ತೀಸ್ ಗಡ್ ಸಬ್ ಇನ್ಸ್ಪೆಕ್ಟರ್, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ಭಾವಚಿತ್ರಕ್ಕೆ ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಬೊಟ್ಟೋಳಂಡ ಕಾವೇರಮ್ಮ ನಾಣಯ್ಯ, ಮಾಲಾರ್ಪಣೆ ಮಾಡಿದರು. ನಂತರ ನೇತಾಜಿ ಯುವಕ ಸಂಘದ ಧ್ವಜಾರೋಹಣವನ್ನು ಸವಿತ ಅಡಿಕೆರ ನೆರವೇರಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ನೇತಾಜಿ ಯುವಕ ಮಂಡಲದ ಅಧ್ಯಕ್ಷರಾದ ಪಿ.ಕೆ. ಜೀವನ್, ಯುವತಿ ಮಂಡಳಿ ಅಧ್ಯಕ್ಷರಾದ ಬಿ.ಹೆಚ್. ವಿಶಾಲಕ್ಷಿö್ಮ ರೈ ಹಾಜರಿದ್ದರು.
ಸಾರ್ವಜನಿಕ ಪುರುಷರ, ಮಹಿಳೆಯರ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಗುಡ್ಡಗಾಡು ಓಟ, ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಗಳನ್ನು ನಡೆಸಲಾಯಿತು. ವಾಲಿಬಾಲ್ ಪಂದ್ಯಾಟಕ್ಕೆ ಒಟ್ಟು ೧೦ ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯಾಟವನ್ನು ಮದೆನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉದ್ಘಾಟಿಸಿದರು. ಫೈನಲ್ ಪಂದ್ಯದಲ್ಲಿ ಸಿಗ್ನೇಚರ್ ಫ್ರೆಂಡ್ಸ್, ಬಾಣಂಗಾಲ ತಂಡವು ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಎನ್. ನಟರಾಜ್, ರಾಜ್ಯ ನಿರ್ದೇಶಕರು, ನೆಹರು ಯುವ ಕೇಂದ್ರ ಸಂಘಟನೆ ಬೆಂಗಳೂರು, ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ಮಾಚಯ್ಯ, ಮದೆನಾಡು ಪಂಚಾಯಿತಿ ಸದಸ್ಯ ಜಯರಾಜ್ ಅಗಸ್ಟಿನ್ ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಎಂ.ಸಿ., ನೇತಾಜಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹಮ್ಮದ್ ರಫೀಕ್, ನೇತಾಜಿ ಯುವತಿ ಮಂಡಳಿಯ ಮಾಜಿ ಕಾರ್ಯದರ್ಶಿ ಬಿ.ವಿ. ದೇವಕ್ಕಿ ಇವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಾಜರಿದ್ದ ಎಲ್ಲಾ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಸಂಘದ ವತಿಯಿಂದ ಕಲ್ಪಿಸಲಾಗಿತ್ತು.