ಶ್ರೀ ಸದಾಶಿವ ಸ್ವಾಮೀಜಿ

ಕುಶಾಲನಗರ, ಫೆ. ೨: ಧರ್ಮದ ತಳಹದಿಯಿಂದ ಮಾತ್ರ ಮನುಷ್ಯನಿಗೆ ಆಂತರಿಕವಾದ ಸುಖ, ಶಾಂತಿ ಹಾಗೂ ಮಾನಸಿಕವಾದ ನೆಮ್ಮದಿ ದೊರಕಲು ಸಾಧ್ಯ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ನಿಜ ಶರಣ ಅಂಬಿಗರ ಚೌಡಯ್ಯ ಸ್ಮರಣೆ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನ ಈ ಮಾನವ ಜಗತ್ತು ಕಂಡ ಸುವರ್ಣ ಶತಮಾನ. ಅಂದು ವಚನಕಾರರು ಮಾಡಿದ ಚಳುವಳಿ ಸಾರ್ವಕಾಲಿಕವಾದದು ಎಂದರು.

ಬಸವಣ್ಣ, ಅಲ್ಲಮ ಪ್ರಭುಗಳು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ ಮೊದಲಾದ ಶರಣರು ಹಾಕಿ ಕೊಟ್ಟ ಧರ್ಮದ ತಳಹದಿ ಯನ್ನು ಕಡೆಗಣಿಸಿದ್ದರಿಂದಲೇ ಸಮಾಜ ದಲ್ಲಿ ಎಲ್ಲೆಡೆ ಅಶಾಂತಿ, ಅತೃಪ್ತಿ, ಭಯೋತ್ಪಾದಕತೆ, ಕಳ್ಳತನ, ಮೋಸ, ದರೋಡೆ ಗಳು ಹೆಚ್ಚುತ್ತಿವೆ ಎಂದು ಸದಾಶಿವ ಶ್ರೀಗಳು ವಿಷಾದಿಸಿದರು.

ನಿಜ ಶರಣ ಮಡಿವಾಳ ಮಾಚಯ್ಯ ಅವರ ಜೀವನ ಹಾಗೂ ಸಾಧನೆಗಳ ಕುರಿತು ಪ್ರವಚನ ನೀಡಿದ ಕವಯತ್ರಿ ಹಾಗೂ ಸಾಹಿತಿ ರಾಣಿ ವಸಂತ್, ಹನ್ನೆರಡನೇ ಶತಮಾನದ ವಚನಕಾರರ ಪೈಕಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠುರವಾಗಿಯೇ ವಚನಗಳನ್ನು ಬರೆದು ಸಮಾಜವನ್ನು ಜಾಗೃತಗೊಳಿಸಿದ್ದರು ಎಂದರು.

ಮುಖ್ಯ ಅತಿಥಿಯಾಗಿದ್ದ ಕುಶಾಲನಗರದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀಕಾಂತ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ನಿತ್ಯದ ಆಗುಹೋಗುಗಳ ಬುತ್ತಿಯೇ ವಚನ ಸಾಹಿತ್ಯ.

ವಚನಕಾರರಲ್ಲಿ ಕಾಯಕ ಪ್ರಜ್ಞೆ ಪ್ರಮುಖವಾಗಿತ್ತು ಎಂದು ವಚನಕಾರರ ಉದ್ದೇಶಗಳನ್ನು ವಿಶ್ಲೇಷಿಸಿದರು.

ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಲೆ ದಿನೇಶ್, ಶಿಕ್ಷಕ ಸಿ.ಪಿ. ಮಂಜು ಕೊಡ್ಲಿಪೇಟೆ ಸೋಮಶೇಖರ ಶಾಸ್ತಿç ಇದ್ದರು. ವಿದ್ಯಾರ್ಥಿಗಳಿಂದ ಅಂಬಿಗರ ಚೌಡಯ್ಯ ಅವರ ವಚನಗಳ ಗಾಯನ ನಡೆಯಿತು. ವಿದ್ಯಾರ್ಥಿನಿ ನವ್ಯ ಸ್ವಾಗತಿಸಿ, ಶ್ರಾವ್ಯ ವಂದಿಸಿದರು.