ಸೋಮವಾರಪೇಟೆ, ಫೆ. ೨: ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ೧೦೮ ಆ್ಯಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಹೆರಿಗೆಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ತಾಲೂಕಿನ ಬಾಣಾವರ ಹಾಡಿಯ ನಿವಾಸಿ ಬೇಬಿ ಎಂಬವರಿಗೆ ನಿನ್ನೆ ರಾತ್ರಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ೧೦೮ಗೆ ಕರೆ ಮಾಡಿದ್ದಾರೆ. ಸೋಮವಾರಪೇಟೆಯಿಂದ ತೆರಳಿದ ೧೦೮ ಆ್ಯಂಬ್ಯುಲೆನ್ಸ್ ಗರ್ಭಿಣಿಯನ್ನು ಸೋಮವಾರಪೇಟೆ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಅಬ್ಬೂರುಕಟ್ಟೆ ಅರಣ್ಯ ಪ್ರದೇಶದ ರಸ್ತೆಯಲ್ಲಿ ನೋವು ಉಲ್ಬಣಗೊಂಡಿದೆ.
ತಕ್ಷಣ ೧೦೮ ಸಿಬ್ಬಂದಿಯಾದ ಸ್ಟಾಫ್ನರ್ಸ್ ಮಮತಾ ಹಾಗೂ ಅರುಣ್ ಕುಮಾರ್ ಅವರುಗಳು ಆ್ಯಂಬ್ಯುಲೆನ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.