ಸೋಮವಾರಪೇಟೆ, ಫೆ. ೨: ತಾಲೂಕಿನ ಅಭಿವೃದ್ಧಿಗಾಗಿ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್‌ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕರು ಸೇರಿ ಕೊಂಡು ರಾಜಕೀಯ ರಹಿತವಾಗಿ ಅಭಿವೃದ್ಧಿ ಪರ ಹೋರಾಟಕ್ಕೆ ತೀರ್ಮಾ ನಿಸಲಾಗಿದೆ ಎಂದು ಹೇಳಿದರು.

ಜನಸಾಮಾನ್ಯರು ಹಾಗೂ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೂಲಕ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯುವಕರನ್ನು ಸಂಘಟಿಸಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಹಾಗೂ ಯುವ ನಾಯಕತ್ವ ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ರೈತರು ಹಾಗೂ ಬಡವರಿಗೆ ಶೋಷಣೆಯಾಗದಂತೆ ನೋಡಿಕೊಳ್ಳುವುದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿ ಗಳಿಗೆ ತಲುಪುವಂತೆ ನೋಡಿಕೊಳ್ಳುವ ಕೆಲಸವನ್ನು ಸಮಿತಿ ಸದಸ್ಯರು ಮಾಡುತ್ತಾರೆ ಎಂದರು.

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ, ತಾಲೂಕು ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ನಡೆಸುವುದು. ಕೃಷಿ ಪ್ರಧಾನ ಗ್ರಾಮಗಳಲ್ಲಿ ಕೃಷಿ ಬೆಳೆಗಳ ಬಗ್ಗೆ ವಿಶೇಷ ಶಿಬಿರಗಳನ್ನು ಏರ್ಪಡಿಸುವುದು. ಸರ್ಕಾರದ ವತಿಯಿಂದ ನಿರ್ಮಾಣವಾಗುವ ಕಾಮಗಾರಿಗಳ ಬಗ್ಗೆ ಎಚ್ಚರ ವಹಿಸಿ, ಕಳಪೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಸಮಿತಿ ಮಾಡಲಿದೆ ಎಂದು ಹೇಳಿದರು. ಯುವಜನರಲ್ಲಿ ಸ್ವ ಉದ್ಯೋಗದಂತಹ ಸ್ವಾವಲಂಬಿ ವೃತ್ತಿಯನ್ನು ಕೈಗೊಳ್ಳಲು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇವತ್ತಿಗೂ ತಾಲೂಕಿನ ಅನೇಕ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ತಲುಪಬೇಕಾಗಿದೆ. ರಸ್ತೆ, ಚರಂಡಿ, ಸೇತುವೆ ನಿರ್ಮಾಣ ವಾಗಬೇಕು. ಕೆಲ ಗ್ರಾಮಗಳಿಗೆ ಇವತ್ತಿಗೂ ಬಸ್ ಸಂಚಾರ ಸೌಲಭ್ಯ ವಿಲ್ಲ. ಮೊದಲು ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಜನಪ್ರತಿನಿಧಿ ಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಟಿ.ಆದರ್ಶ್, ಪದಾಧಿಕಾರಿಗಳಾದ ಪಿ.ಕೆ. ರವಿ, ಜಿ.ಎಂ. ಹೂವಯ್ಯ ಉಪಸ್ಥಿತರಿದ್ದರು.