ಮಡಿಕೇರಿ, ಫೆ. ೩: ಲಾರಿ ನಿಲುಗಡೆ ವಿಚಾರದಲ್ಲಿ ಚಾಲಕರು ಹಾಗೂ ವ್ಯಾಪಾರಿಗಳ ನಡುವೆ ಗೊಂದಲ ಉಂಟಾದ ಘಟನೆ ನಡೆದಿದೆ.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಈಗಾಗಲೇ ಲಾರಿಗಳನ್ನು ನಿಲುಗಡೆಗೊಳಿಸಲಾಗುತ್ತಿದ್ದು, ಜಿಲ್ಲಾಡಳಿತದ ಆದೇಶದಂತೆ ನಿಲುಗಡೆ ವ್ಯಾಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಾಲಕರು, ಅನತಿ ದೂರದಲ್ಲಿರುವ ಹೊಟೇಲ್ ಹಾಗೂ ಸ್ಪೆöÊಸಸ್ ಅಂಗಡಿಗಳ ಮುಂದೆ ಫಲಕ ಅಳವಡಿಸಲು ಮುಂದಾದ ಸಂದರ್ಭ ವ್ಯಾಪಾರಿ ಹಾಗೂ ಚಾಲಕರುಗಳ ನಡುವೆ ವಾಗ್ವಾದ ಉಂಟಾಗಿದೆ. ವ್ಯಾಪಾರಿಗಳು ಕ್ರಮಕ್ಕೆ ವಿರೋಧಿಸಿದರು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂಬAಧ ಮಾತನಾಡಿದ ಲಾರಿ ಚಾಲಕ ಹಾಗೂ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಬಿ.ಜಿ. ಮೋಹನ್, ನಿಲುಗಡೆ ವಿಚಾರದಲ್ಲಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ ಖಾಸಗಿ ಬಸ್ ನಿಲ್ದಾಣದ ಎದುರು ಜಾಗ ನೀಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಅವಕಾಶ ದೊರೆಯದ ಕಾರಣ ಜಿಲ್ಲಾಡಳಿತದಿಂದ ನಿಲ್ದಾಣವಿರುವ ಜಾಗದ ೧೦೦ ಮೀಟರ್‌ನಲ್ಲಿ ನಿಲುಗಡೆಗೆ ಅವಕಾಶ ನೀಡಿತ್ತು. ಅದರನ್ವಯ ಫಲಕ ಅಳವಡಿಸಲು ಮುಂದಾದಾಗ ವಿರೋಧ ವ್ಯಕ್ತವಾಗಿದೆ. ನಮಗೆ ಹೊಸ ಬಸ್ ನಿಲ್ದಾಣದ ಎದುರು ಇರುವ ಜಾಗದಲ್ಲಿ ಅವಕಾಶ ನೀಡುವಂತೆ ಕೋರಿದರು.

ಚಿಕ್ಕ ರಸ್ತೆಯಲ್ಲಿ ಲಾರಿ ನಿಲುಗಡೆಯಿಂದ ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ವರ್ತಕರು ಹಾಗೂ ಚಾಲಕರಿಗೂ ಸಮಸ್ಯೆಯಾಗದಂತೆ ನಿಲುಗಡೆಗೆ ಪರ್ಯಾಯ ಸ್ಥಳ ನೀಡುವಂತೆ ವ್ಯಾಪಾರಿಗಳು ಆಗ್ರಹಿಸಿದರು. ಈ ಬಗ್ಗೆ ಸೋಮವಾರದಂದು ನಗರಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.