ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್. ದಿನೇಶ್ ಕುಮಾರ್
ಬೆಂಗಳೂರು, ಫೆ. ೩: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರತಿನಿಧಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪಿ.ಎಸ್. ದಿನೇಶ್ ಕುಮಾರ್ ಅವರು ಫೆಬ್ರವರಿ ೨೫, ೧೯೬೨ ರಂದು ಜನಿಸಿದರು. ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜು ಮತ್ತು ಬಿಎಂಎಸ್ ಕಾಲೇಜು ವಿದ್ಯಾರ್ಥಿ. ಜನವರಿ ೨, ೨೦೧೫ ರಂದು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು ಡಿಸೆಂಬರ್ ೩೦, ೨೦೧೬ ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ರಾಜ್ಯ ಹೈಕೋರ್ಟ್ನಲ್ಲಿ ೧೯೯೦ ರಲ್ಲಿ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ಕೊಠಡಿಯಲ್ಲಿ ದಿನೇಶ್ ಕುಮಾರ್ ಅವರ ಕಾನೂನು ಅಭ್ಯಾಸ ಪ್ರಾರಂಭವಾಯಿತು. ನ್ಯಾಯಮೂರ್ತಿ ಕುಮಾರ್ ಅವರನ್ನು ೧೯೯೮ ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಮತ್ತು ೨೦೦೩ ರಲ್ಲಿ ಹಿರಿಯ ಸ್ಥಾಯಿ ವಕೀಲರಾಗಿ ನೇಮಿಸಲಾಯಿತು. ಅವರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಬಿಎಸ್ಎನ್ಎಲ್, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ), ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ (ಎಐಸಿಟಿಇ), ರಾಷ್ಟಿçÃಯ ವಕೀಲರ ಹಿರಿಯ ಸ್ಥಾಯಿ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಬಿಐ ನಿರ್ದೇಶಕರ ನೇಮಕ, ಐಟಿಡಿಸಿ ಹೋಟೆಲ್ಗಳ ಹೂಡಿಕೆ, ಕೇಂದ್ರ ಹಣಕಾಸು ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ, ಭ್ರಷ್ಟಾಚಾರಕ್ಕೆ ಸಂಬAಧಿಸಿದ ವಿಷಯಗಳಲ್ಲಿ ವಿವಿಧ ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ಗಳಲ್ಲಿ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಪಶ್ಚಿಮ ಬಂಗಾಳ: ಶಾಸಕರ ಭವನದಲ್ಲಿ ಅಂಗರಕ್ಷಕನ ಶವ ಪತ್ತೆ
ಕೋಲ್ಕತ್ತಾ, ಫೆ. ೩: ತೃಣಮೂಲ ಕಾಂಗ್ರೆಸ್ ಶಾಸಕನ ಅಂಗರಕ್ಷಕನ ಶವ ಪಶ್ಚಿಮ ಬಂಗಾಳ ಶಾಸಕರ ಭವನದ ಆವರಣದಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಜಯದೇಬ್ ಘೋರಾಯ್ ಎಂದು ಗುರುತಿಸಲಾಗಿದ್ದು, ಇವರು ಪುರುಲಿಯ ಬಂಡ್ವಾನ್ ಟಿಎಂಸಿ ಶಾಸಕ ರಾಜೀಬ್ ಲೋಚನ್ ಅವರ ಅಂಗರಕ್ಷಕರಾಗಿದ್ದರು ಎಂದು ಅವರು ಹೇಳಿದ್ದಾರೆ. ಈ ಸಾವಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಶಾಸಕರ ಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಬಿಜೆಪಿ ಶಾಸಕ-ಶಿವಸೇನಾ ಶಿಂಧೆ ಬಣದ ನಡುವೆ ಘರ್ಷಣೆ
ಥಾಣೆ (ಮಹಾರಾಷ್ಟç), ಫೆ. ೩: ಭಾರತೀಯ ಜನತಾ ಪಕ್ಷದ ಶಾಸಕ ಗಣಪತ್ ಗಾಯಕ್ವಾಡ್ ಬೆಂಬಲಿಗರು ಶಿವಸೇನಾ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಥಾಣೆಯ ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಹೇಶ್ ಗಾಯಕ್ವಾಡ್ ಮತ್ತು ಅವರ ಬೆಂಬಲಿಗನೊಬ್ಬನಿಗೆ ಐದು ಗುಂಡುಗಳು ತಗುಲಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಮೀನು ವಿವಾದಕ್ಕೆ ಸಂಬAಧಿಸಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರುವ ತನಕ ಹೋಗಿತ್ತು. ಅದರಂತೆ ಇಬ್ಬರು ರಾಜಕಾರಣಿಗಳು ಪರಸ್ಪರ ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಇಬ್ಬರು ರಾಜಕಾರಣಿಗಳ ಬೆಂಬಲಿಗರೂ ಕೂಡ ಅಲ್ಲಿ ಸೇರಿದ್ದರು. ಈ ನಡುವೆ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದ್ದು, ಗಣೇಶ್ ಗಾಯಕ್ವಾಡ್ ಅವರು ಮಹೇಶ್ ಗಾಯಕ್ವಾಡ್ ಮೇಲೆ ನಾಲ್ಕು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾರೆಂದು ತಿಳಿದುಬಂದಿದೆ. ಗಾಯಗೊಂಡ ಇಬ್ಬರನ್ನು ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುಂಡು ಹಾರಿಸಿದ ಗಣಪತ್ ಗಾಯಕ್ವಾಡ್ ಅವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.