ಸಿದ್ದಾಪುರ, ಫೆ. ೩: ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರರು ಕಾಫಿ ಕೊಯ್ಲು ಮಾಡಿ ಕಣದಲ್ಲಿ ಹಾಕಿದ್ದ ಕಾಫಿಗಳನ್ನು ಕಾಡಾನೆಗಳು ತುಳಿದಿವೆ. ಮನೆ ಅಂಗಳಕ್ಕೆ ಕಾಲಿಡುತ್ತಿರುವ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದಲ್ಲದೆ ಕಾಡುಕೋಣಗಳು ಕೂಡ ಕಾಫಿ ತೋಟಗಳ ಒಳಗೆ ಬೀಡುಬಿಟ್ಟಿದ್ದು ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳ ಹಾವಳಿಗಳನ್ನು ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.