ಮಡಿಕೇರಿ, ಫೆ. ೨: ಕೊಡಗು ಜಿಲ್ಲೆಯಲ್ಲಿ ಶವಸಂಸ್ಕಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದ ಮೂಲಕ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಶವ ಸಂಸ್ಕಾರಕ್ಕೆ ಇದುವರೆಗೆ ಎಲ್ಲಿಯೂ ವಿದ್ಯುತ್ ಚಿತಾಗಾರ ಇರುವದಿಲ್ಲ. ಜಿಲ್ಲೆಯಲ್ಲಿ ಮಳೆಗಾಲ ಅಧಿಕವಿರುತ್ತದೆ. ಈ ಸಂದರ್ಭದಲ್ಲಿ ಕಟ್ಟಿಗೆಯ ಅಭಾವ ಹಾಗೂ ದರ ದುಪ್ಪಟ್ಟಾಗಿರುತ್ತದೆ. ಕಟ್ಟಿಗೆ ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯುವ ಸಂದರ್ಭವೂ ಎದುರಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕ ಬಡಜನರಿದ್ದು, ಇದನ್ನೆಲ್ಲ ನಿಭಾಯಿಸಲು ಅಶಕ್ತರಾಗಿರುತ್ತಾರೆ. ಈ ಬಗ್ಗೆ ಇಲ್ಲಿಯವರೆಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನ ಹರಿಸಿರುವದಿಲ್ಲ. ಹಾಗಾಗಿ ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ ಐದು ತಾಲೂಕುಗಳ ಕೇಂದ್ರ ಸ್ಥಾನದಲ್ಲಾದರೂ ಒಂದೊAದು ವಿದ್ಯುತ್ ಚಿತಾಗಾರ ನಿರ್ಮಿಸಿಕೊಡಬೇಕೆಂದು ಬಿಎಸ್‌ಪಿ ಅಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಗಮನಕ್ಕೆ ತಂದರು. ನಂತರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾ ಉಸ್ತುವಾರಿ ಕಳ್ಳೀರ ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌರೀರ ದೇವಯ್ಯ ಪದಾಧಿಕಾರಿಗಳು ಹಾಜರಿದ್ದರು.