ವೀರಾಜಪೇಟೆ, ಫೆ. ೨: ಕೇರಳ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಗೊAಡ ತ್ಯಾಜ್ಯ ತುಂಬಿದ ವಾಹನ ವಶಕ್ಕೆ ಪಡೆದಿರುವ ಘಟನೆ ಮಾಕುಟ್ಟ ಗಡಿ ಅರಣ್ಯ ತಪಾಸಣೆ ಕೇಂದ್ರದಲ್ಲಿ ನಡೆದಿದೆ.
ಕೇರಳ ರಾಜ್ಯದ ಹಲವು ಭಾಗಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆಗಮಿಸುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಗಡಿ ಭಾಗವಾದ ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರದಲ್ಲಿ ರಾಜ್ಯಕ್ಕೆ ತೆರಳುವ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ನಿನ್ನೆ ರಾತ್ರಿ ೧೧ ಗಂಟೆಗೆ ಕಂಟೈನರ್ ವಾಹನ (ಟಿ.ಎನ್-೯೪-ವೈ-೯೨೮೮) ವಾಹನ ಬಂದಿದೆ. ವಾಹನ ಚಾಲಕನಿಗೆ ರಶೀದಿ ತೋರಿಸಲು ಸಿಬ್ಬಂದಿಗಳು ಹೇಳಿದ್ದಾರೆ. ಚಾಲಕ ನೀಡಿರುವ ಬಿಲ್ ನಕಲಿ ಎಂದು ತಿಳಿದು ಬಂದಿದೆ. ಅನುಮಾನಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಹನ ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ವೇಳೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ತುಂಬಿ ಸಾಗಾಟ ಮಾಡುತ್ತಿರುವುದು ಗೋಚರಿಸಿದೆ. ವಾಹನ ಚಾಲಕನ ಬಳಿ ಯಾವುದೇ ಸಮರ್ಪಕವಾದ ದಾಖಲೆಗಳು ಇಲ್ಲದಿರುವುದು ತಿಳಿದುಬಂದಿದೆ. ವಾಹನ ವಶಕ್ಕೆ ಪಡೆದ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ ಸುಹಾನ ಹರೀಶ್ ಅತ್ತಾವರ ಅವರ ಮಾರ್ಗದರ್ಶನದಂತೆ ಬೇಟೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿದ್ದಾರೆ.
ಇಂದು ಮುಂಜಾನೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಾಹನ ಪರಿಶೀಲನೆ ಮಾಡಿದ್ದಾರೆ. ಕೇರಳದ ಪಯ್ಯಾಊರಿನಿಂದ ಮೈಸೂರಿಗೆ ತೆರಳುತ್ತಿರುವುದಾಗಿ ವಾಹನ ಚಾಲಕ ಹೇಳಿಕೆ ನೀಡಿದ್ದಾನೆ. ಅಕ್ರಮವಾಗಿ ತ್ಯಾಜ್ಯ ಸಾಗಾಟ ಮಾಡಿರುವುದರಿಂದ. ಪಂಚಾಯಿತಿ ರೂ. ೧೫೦೦೦ ದಂಡ ವಸೂಲಿ ಮಾಡಿದೆ. ವಾಹನವನ್ನು ಮರಳಿ ಕೇರಳಕ್ಕೆ ವಾಪಸು ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹೆಚ್.ಬಿ. ಉಮೇಶ್, ವೆಂಕಟೇಶ್ ಡಿ ನಲವಾಡೆ, ಚಂದ್ರಶೇಖರ್, ರೇಣುಕುಮಾರ್, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಯವರು, ಬೇಟೋಳಿ ಗ್ರಾಮ ಪಂಚಾಯಿತಿ ಬಿಲ್ ಸಂಗ್ರಾಹಕ ದಿನೇಶ್ ಪಾಲ್ಗೊಂಡಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ