ವೀರಾಜಪೇಟೆ, ಫೆ. ೧: ‘ಆಣೆ ಸತ್ಯ ಪ್ರಮಾಣಗಳು ನಿಮ್ಮ ಮನಸ್ಸು ಹಾಗೂ ನೀವು ಮಾಡುವ ಕೆಲಸ ಕಾರ್ಯಗಳ ಮೇಲೆ ಮಾಡಿಕೊಳ್ಳಿ. ದೇವಾಲಯಕ್ಕೆ ಬಂದು ತಕ್ಕ ಮುಖ್ಯಸ್ಥರು ಹಾಗೂ ಅಭಿವೃದ್ದಿ ಸಮಿತಿಗೆ ಮಾಹಿತಿ ನೀಡದೆ ತಮಗಿಷ್ಟ ಬಂದ ರೀತಿಯಲ್ಲಿ ನಡೆದುಕೊಂಡು ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣವನ್ನು ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಲ್ಲದೆ ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಹಾತೂರು ವನ ಭದ್ರಕಾಳಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ ಎಚ್ಚರಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನವರಿ ೨೯ರಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ಥಾನ ಕಳೆದುಕೊಂಡು ಮುಜುಗರಕ್ಕೆ ಸಿಲುಕಿ ಬಿಜೆಪಿ ಪಕ್ಷದ ಗೋಣಿಕೊಪ್ಪ ಶಕ್ತಿಕೇಂದ್ರದ ಸುರೇಶ್ ರೈ ಎಂಬವರ ನೇತೃತ್ವದಲ್ಲಿ ಹಾತೂರು ವನಭದ್ರಕಾಳಿ ದೇವಾಯಲದಲ್ಲಿ ಆಣೆ ಪ್ರಮಾಣ ಮಾಡಿಸಲಾಗಿತ್ತು.

ಜನವರಿ ೩೧ ರಂದು ಅಭಿವೃದ್ದಿ ಸಮಿತಿ ಹಾಗೂ ತಕ್ಕ ಮುಖ್ಯಸ್ಥರು ಸೇರಿ ತುರ್ತು ಸಭೆ ನಡೆಸಿ ಆಣೆ ಪ್ರಮಾಣ ನಡೆದ ಘಟನೆಯನ್ನು ಖಂಡಿಸಿದರಲ್ಲದೆ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡುವ ಪದ್ಧತಿ ಇಲ್ಲ. ಈವರೆಗೆ ಇಲ್ಲದ ಆಚಾರ ವಿಚಾರಗಳನ್ನು ಸೃಷ್ಠಿಮಾಡುವುದು ಬೇಡ. ಎಲ್ಲಿಂದಲೋ ಬಂದು ನಮ್ಮ ಮಾಹಿತಿಗೆ ಬಾರದೆ ಸತ್ಯ ಪ್ರಮಾಣ ನಡೆಸುವುದು ಸರಿಯಲ್ಲ. ಯಾರೇ ಆಗಲಿ ಇನ್ನು ಮುಂದೆ ಇಂತಹ ಘಟನೆಗಳನ್ನು ನಡೆಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಬಹಳ ಶಕ್ತಿಯುತವಾದ ದೇವರಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ನಡೆದುಕೊಂಡರೆ ತಮ್ಮ ಜೀವನವನ್ನು ತಾವೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ತಕ್ಕ ಮುಖ್ಯಸ್ಥರಾದ ಕೊಕ್ಕಂಡ ಅರ್ಜುನಾ, ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಕೊಂಗೇಪAಡ ರವಿ, ನಿರ್ದೇಶಕ ಕೊಂಗAಡ ಎಸ್. ಮಾದಯ್ಯ ಉಪಸ್ಥಿತರಿದ್ದರು.