ಚೆಟ್ಟಳ್ಳಿ, ಫೆ. ೧: ಚೆಟ್ಟಳ್ಳಿ ಪ್ರೌಢಶಾಲೆಯ ಮೈದಾನದಲ್ಲಿ ಇತ್ತೀಚೆಗೆ ಕ್ರೀಡೋತ್ಸವ ನೆರವೇರಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಮಾದೇಟಿರ ಪಿ. ತಿಮ್ಮಯ್ಯ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಹೆಚ್.ಕೆ. ಬೋಜ ಭಾಗವಹಿಸಿದ್ದರು.

ಮಾದೇಟಿರ ಪಿ. ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿ ಮಾತ ನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣವನ್ನು ಹೊಂದ ಬೇಕೆಂದರು. ಕ್ರೀಡೆ ಹಾಗೂ ಯೋಗದಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದರು. ದುಶ್ಚಟಗಳಿಂದ ದೂರವಿರುವುದರ ಮೂಲಕ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು.

ಮತ್ತೋರ್ವ ಅತಿಥಿ ಹೆಚ್.ಕೆ. ಬೋಜ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಈ ವೇದಿಕೆ ಅತ್ಯಂತ ಸೂಕ್ತವಾಗಿದೆ ಎಂದರು. ಕ್ರೀಡೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದರು. ಜೊತೆಗೆ ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ಪರಸ್ಪರ ಸಹಕಾರ, ಸಹಬಾಳ್ವೆಯನ್ನು ಹೆಚ್ಚಿಸಲಿದೆ ಎಂದರು.

ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಕ್ರೀಡೆಯಲ್ಲಿನ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವಂತ ಸದೃಢ ಯುವ ಜನಾಂಗ ನಿರ್ಮಾಣ ಮಾಡಬೇಕಾದರೆ ಕ್ರೀಡೆ ಹಾಗೂ ಯೋಗ ಅಗತ್ಯ ಎಂದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ವ್ಯಾಯಾಮ ಹಾಗೂ ಯೋಗಾಸನ ಪ್ರದರ್ಶನ, ಬಾಲಕ-ಬಾಲಕಿಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಚೆಟ್ಟಳ್ಳಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ನಿಧಾನಗತಿಯ ಮೋಟಾರ್ ಬೈಕ್ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ ಕೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮುಖ್ಯೋಪಾಧ್ಯಾಯರಾದ ಕೆ. ತಿಲಕ ಸ್ವಾಗತಿಸಿ, ಗಣಿತ ಶಿಕ್ಷಕ ಜಿ.ಸಿ. ಸತ್ಯನಾರಾಯಣ ವಂದಿಸಿ, ಕನ್ನಡ ಶಿಕ್ಷಕಿ ಯು. ಸುನಂದ ನಿರೂಪಿಸಿದರು. ಕ್ರೀಡೋತ್ಸವವನ್ನು ಶಾಲಾ ದೈಹಿಕ ಶಿಕ್ಷಕಿ ಗೀತಾ ಅಯ್ಯಪ್ಪ ನಡೆಸಿಕೊಟ್ಟರು.