ವೀರಾಜಪೇಟೆ, ಜ. ೩೧: ವೀರಾಜಪೇಟೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಅಹವಾಲು ಸ್ವೀಕರಿಸುವುದಕ್ಕೂ ಮೊದಲು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರ ಜೊತೆ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಬಾಳುಗೋಡು ಯರವ ಹಾಡಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದರು.
ಬಳಿಕ ಮಾತನಾಡಿದ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಎಲ್. ನಾರಾಯಣಸ್ವಾಮಿ ಅವರು, ಭಾರತ ದೇಶ ಚಂದ್ರಯಾನ ಉಡಾವಣೆ ಮಾಡಿ ಯಶಸ್ಸುಗಳಿಸಿದೆ. ವಿಶ್ವದ ಜಿಡಿಪಿಯಲ್ಲಿ ೧೦ ರೊಳಗಿನ ಸ್ಥಾನವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ವಾಸಕ್ಕೆ ಯೋಗ್ಯವಾದ ನಿವೇಶನ, ಮನೆ, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕ ಹೊಂದದೆ ಇರುವ ಎಷ್ಟೋ ಕಡುಬಡ ಕುಟುಂಬಗಳಿದ್ದು, ಭಾರತ ವಿಕಾಸ ಹೊಂದಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಅವಲೋಕನ ಮಾಡಬೇಕಿದೆ.
ಆದಿವಾಸಿ ಜನರಿಗೆ ಬೇಕಿರುವ ನಿವೇಶನ, ಮನೆ, ದೀಪ, ಹತ್ತಿರದಲ್ಲಿ ಅಂಗನವಾಡಿ, ಶಾಲೆ, ಇಂತಹ ಕನಿಷ್ಟ ಮೂಲ ಸೌಲಭ್ಯ ಇಲ್ಲದಿರುವುದು ನಮ್ಮ ವ್ಯವಸ್ಥೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ತೋರಿಸುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕಿದೆ ಎಂದರು.
ಬಾಳುಗೋಡು ಯರವ ಹಾಡಿಯ ಜನರಿಗೆ ಕನಿಷ್ಟ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು. ಇಂತಹ ವಸತಿರಹಿತ ನಿರ್ಗತಿಕ ಕುಟುಂಬಗಳಿಗೆ ಸೌಲಭ್ಯ ಇಲ್ಲದಿರುವುದು ಬೇಸರ ತರಿಸುತ್ತದೆ. ನಿರ್ಗತಿಕರಿಗೆ ಸೌಲಭ್ಯ ಕಲ್ಪಿಸುವುದು ಪ್ರಥಮ ಆದ್ಯತೆ ಆಗಬೇಕು ಎಂದರು.
ಈ ಜನರಿಗೆ ಶೇ.೫ ರಷ್ಟು ಸರ್ಕಾರದ ಸೌಲಭ್ಯಗಳು ತಲುಪಿಲ್ಲ. ಹೀಗಾದರೆ ಸಮಾಜದ ಅಭಿವೃದ್ಧಿ ಹೇಗೆ ಆಗುತ್ತದೆ
(ಮೊದಲ ಪುಟದಿಂದ) ಎಂದು ಪ್ರಶ್ನಿಸಿದ ಅವರು, ದೇಶ, ರಾಜ್ಯ, ಸಮಾಜ ಬೆಳೆಯುತ್ತಿದೆ ಎಂದು ಹೇಳುತ್ತೇವೆ. ಆದರೆ ಇಂತಹ ಜನರನ್ನು ಯಾರೂ ಸಹ ಗುರುತಿಸುವುದಿಲ್ಲ. ಇಂತಹ ನಿರ್ಗತಿಕರನ್ನು ಗುರುತಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂಬ ಮನೋಭಾವ ಯಾರಿಗೂ ಇಲ್ಲ ಎಂದು ವಿಷಾದಿಸಿದರು.
ಮಾನವ ಹಕ್ಕು ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಮಾತನಾಡಿ, ಬಾಳುಗೋಡು ಯರವ ಹಾಡಿಯ ಜನರ ಸ್ಥಿತಿಗತಿಯನ್ನು ಗಮನಿಸಲಾಗಿದೆ. ಮಾನವ ಹಕ್ಕು ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಮಾನವ ಹಕ್ಕು ಉಲ್ಲಂಘನೆಯಾಗದAತೆ ಗಮನಹರಿಸಬೇಕಿತ್ತು. ಆದರೆ ಈ ಕಾರ್ಯ ಆಗಿಲ್ಲ ಎಂದು ಹೇಳಿದರು.
ಯಾರು ಯಾರನ್ನು ಸಹ ಶೋಷಣೆ ಮಾಡಬಾರದು. ಆದರೆ ಇಂತಹ ಹಾಡಿಗಳನ್ನು ಗಮನಿಸಿದಾಗ ಶೋಷಣೆ ಯಾವ ರೀತಿ ಆಗಿದೆ ಎಂಬುದು ತಿಳಿಯುತ್ತದೆ ಎಂದರು.
ಮತ್ತೊಬ್ಬ ಸದಸ್ಯರಾದ ಶ್ಯಾಮ್ ಭಟ್ ಮಾತನಾಡಿ, ಮಾನವ ಹಕ್ಕುಗಳಿಗೆ ಸಂಬAಧಿಸಿದAತೆ ನಾಗರಿಕರಲ್ಲಿ ಅರಿವು ಇರಬೇಕು. ಬಾಳುಗೋಡು ಯರವ ಕುಟುಂಬದವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ತಲುಪಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದರು.
ಆರ್ಜಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಮತ್ತೊಬ್ಬರು ಅಪಘಾತದಲ್ಲಿ ಕುಟುಂಬದವರು ಮೃತಪಟ್ಟಿದ್ದು, ಯಾವುದೇ ಪರಿಹಾರ ದೊರಕಿಲ್ಲ ಎಂದು ಅವಲತ್ತುಕೊಂಡರು. ಈ ಸಂಬAಧ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಆಯೋಗದ ಪ್ರಮುಖರು ಸೂಚಿಸಿದರು.
ಬಳಿಕ ಮಾನವ ಹಕ್ಕು ಉಲ್ಲಂಘನೆ ಸಂಬAಧಿಸಿದAತೆ ದಾಖಲಾಗಿರುವ ಪ್ರಕರಣಗಳ ವಿಚಾರಣೆ ನಡೆಸಿದರು.
ಹಾಡಿಯಲ್ಲಿ ಸಂವಾದ
ಬಾಳುಗೋಡು ಯರವ ಸಮುದಾಯ ವಸತಿ ರಹಿತ ಕುಟುಂಬದವರ ಹಾಡಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಎಲ್.ನಾರಾಯಣಸ್ವಾಮಿ, ಸದಸ್ಯರಾದ ಎಸ್.ಕೆ. ವಂಟಿಗೋಡಿ ಮತ್ತು ಟಿ.ಶ್ಯಾಮ್ ಭಟ್ ಅವರುಗಳು ಭೇಟಿ ನೀಡಿ ಕುಟುಂಬದವರ ಜೊತೆ ಸಂವಾದ ನಡೆಸಿದರು.
ನಿವೇಶನ, ಮನೆ ಇಲ್ಲದಿರುವುದು, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಇಲ್ಲದಿರುವುದು, ಟಾರ್ಪಲ್ ಕಟ್ಟಿಕೊಂಡು ಜೀವನ ದೂಡುತ್ತಿರುವುದನ್ನು ಗಮನಿಸಿ ವಿಷಾದ ವ್ಯಕ್ತಪಡಿಸಿದರು.
ಹಾಡಿ ಜನರ ಜೊತೆ ಸಂವಾದ ನಡೆಸಿದ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಎಲ್. ನಾರಾಯಣಸ್ವಾಮಿ ಅವರು ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವಂತೆ ಸಲಹೆ ನೀಡಿದರು.
ಹತ್ತಿರದಲ್ಲಿಯೇ ಏಕಲವ್ಯ ಮಾದರಿ ವಸತಿ ಶಾಲೆ ಇದ್ದು, ಅಲ್ಲಿಗೆ ಸೇರ್ಪಡೆ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.
ಯರವ ಸಮುದಾಯದ ಶೋಭಾ ಅವರು ಜಿಲ್ಲೆಯ ವಿವಿಧ ಭಾಗದ ಲೈನ್ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದೆವು. ಸದ್ಯ ಕಳೆದ ೬ ವರ್ಷಗಳಿಂದ ಬಾಳುಗೋಡು ಪೈಸಾರಿ ಜಾಗದಲ್ಲಿ ಟಾರ್ಪಲ್ ಹೊದಿಕೆ ನಿರ್ಮಾಣ ಮಾಡಿ ಚಳಿ, ಮಳೆ, ಗಾಳಿಯನ್ನು ಎದುರಿಸಿ ವಾಸ ಮಾಡುತ್ತಿದ್ದೇವೆ. ನಮಗೆ ನಿವೇಶನ ಹಕ್ಕು ಪತ್ರ ನೀಡಿಲ್ಲ, ಮನೆ ಇಲ್ಲ, ರಾತ್ರಿ ವೇಳೆಯಲ್ಲಿ ಹಾವುಗಳ ಭಯದಿಂದ ಎಚ್ಚರವಾಗಿ ನಿದ್ರೆಯಿಲ್ಲದೆ ಪ್ರತಿನಿತ್ಯ ದಿನ ಕಳೆಯುತ್ತಿದ್ದು ಬದುಕು ಸಂಕಷ್ಟವಾಗಿದೆ. ಆಹಾರ ಇಲಾಖೆಯಿಂದ ೫ ಕೆ.ಜಿ. ಅಕ್ಕಿ ಸಾಲುತ್ತಿಲ್ಲ, ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಿದರೆ ಮಾತ್ರ ಊಟ. ಇಲ್ಲದಿದ್ದಲ್ಲಿ ಉಪವಾಸದಿಂದ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.
ಕುಡಿಯುವ ನೀರನ್ನು ಒಂದು ಕಿ.ಮೀ. ದೂರದಿಂದ ಹೊತ್ತುಕೊಂಡು ಬರುತ್ತಿದ್ದೇವೆ. ವಿದ್ಯುತ್ ಸಂಪರ್ಕ ಇಲ್ಲದೆ ಪರಿತಪಿಸುತ್ತಿದ್ದೇವೆ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಹಾಗೆಯೇ ನಿವೇಶನ ಹಕ್ಕುಪತ್ರ ದೊರೆಯಬೇಕು. ಜೊತೆಗೆ ಮನೆ ನಿರ್ಮಿಸಿಕೊಡಬೇಕು ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷರಲ್ಲಿ ಯರವ ಕುಟುಂಬಸ್ಥರು ಮನವಿ ಮಾಡಿದರು.
ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾನವ ಹಕ್ಕು ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಇಂದಿನಿAದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಕಂದಾಯ ಇಲಾಖೆಯಿಂದ ಜಾಗವನ್ನು ತಾಲೂಕು ಪಂಚಾಯಿತಿಗೆ ಒದಗಿಸಲಾಗಿದ್ದು, ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಈ ಕೆಲಸಗಳು ಇನ್ನು ೨೦ ದಿನದಲ್ಲಿ ಆಗಬೇಕಿದೆ. ಇಲ್ಲಿನ ಸ್ಥಿತಿಗತಿ ಹಾಗೂ ಪ್ರಗತಿ ಸಂಬAಧ ಆಗಾಗ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು.
ಐಟಿಡಿಪಿ ಇಲಾಖೆಯ ಅಧಿಕಾರಿ ಹೊನ್ನೇಗೌಡ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದAತೆ ವಸತಿ ಶಾಲೆಗೆ ಸೇರ್ಪಡೆಗೆ ಕ್ರಮವಹಿಸಲಾಗುವುದು. ಯರವ ಸಮುದಾಯದವರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾನವ ಹಕ್ಕು ಆಯೋಗಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಇಓ ಅಪ್ಪಣ್ಣ ಹಾಗೂ ಬಿಟ್ಟಂಗಾಲ ಗ್ರಾ.ಪಂ. ಪಿಡಿಓ ವಿಶ್ವನಾಥ್ ಅವರು ಗ್ರಾಮ ಸಭೆಯಲ್ಲಿ ನಿರ್ಧರಿಸಿ ನಿವೇಶನ ಒದಗಿಸಲು ಮುಂದಾಗುವುದಾಗಿ ಹೇಳಿದರು.
ಬೆಂಗಳೂರಿನ ಹೋರಾಟಗಾರರಾದ ಎಚ್.ಎಂ. ವೆಂಕಟೇಶ್ ಮಾತನಾಡಿ, ಬಾಳುಗೋಡುವಿನಲ್ಲಿ ಯರವ ಹಾಡಿಯಲ್ಲಿ ೨೧ ಕುಟುಂಬಗಳಿದ್ದು, ಪ್ರತೀ ಕುಟುಂಬಕ್ಕೂ ಕನಿಷ್ಠ ೫ ಸೆಂಟ್ ಜಾಗ ನೀಡಬೇಕು ಎಂದು ಮನವಿ ಮಾಡಿದರು. ಕುರಿ, ಕೋಳಿ, ಹಂದಿ ಸಾಕಾಣಿಕೆಗೆ ಸಹಕಾರ ನೀಡಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ಹೋರಾಟಗಾರರಾದ ನಂಜರಾಜ ಅರಸು ಧ್ವನಿಗೂಡಿಸಿದರು. ಪ್ರಮುಖರಾದ ಗಪ್ಪು, ಕುಣಿಗಲ್ ನರಸಿಂಹ ಮೂರ್ತಿ ಮತ್ತು ಕುಣಿಗಲ್ ನಾಗರಾಜ್ ಅವರು ಇಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರ್ ರಾಮಚಂದ್ರ, ಪೊಲೀಸ್ ಅಧಿಕಾರಿಗಳು, ಯರವ, ಪಣಿಯ ಆದಿವಾಸಿ ಜನರು ಇದ್ದರು.