ಕೂಡಿಗೆ, ಜ. ೩೧: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ರೇಷ್ಮೆ ಇಲಾಖೆಯ ಕಚೇರಿ ಇದೆ. ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಾತ್ರ ರೇಷ್ಮೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿದ್ದು, ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಕೇವಲ ಓರ್ವ ಕೂಡಿಗೆ, ಜ. ೩೧: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ರೇಷ್ಮೆ ಇಲಾಖೆಯ ಕಚೇರಿ ಇದೆ. ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಾತ್ರ ರೇಷ್ಮೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿದ್ದು, ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಕೇವಲ ಓರ್ವ ಆಯ್ದ ಕೆಲಭಾಗಗಳಲ್ಲಿ ೩೦ ವರ್ಷಗಳಿಂದಲೂ ಕಷ್ಟ ನಷ್ಟಗಳ ನಡುವೆ ತಮ್ಮ ಜಮೀನಿನಲ್ಲಿ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟು ರೇಷ್ಮೆ ಮೊಟ್ಟೆಗಳನ್ನು ತಂದು ರೇಷ್ಮೆ ಬೆಳೆಯನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ರೇಷ್ಮೆ ಗೂಡಿಗೆ ಉತ್ತಮವಾದ ಬೆಲೆ ದೊರಕುತ್ತಿದೆಯಾದರೂ ರೈತರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡುವ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ೨೫ ವರ್ಷಗಳಿಂದಲೂ ಸಮರ್ಪಕವಾಗಿ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡದ ಕಾರಣದಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯು ತೀರಾ ಕಡಿಮೆಯಾಗುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಹಿಪ್ಪೆನೇರಳೆ ಗಿಡಗಳನ್ನು ಕಿತ್ತು ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ.
(ಮೊದಲ ಪುಟದಿಂದ) ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ರೇಷ್ಮೆ ಇಲಾಖೆ ಉಪ ನಿರ್ದೇಶಕರು ಹಾಗೂ ಸಹಾಯಕ ಹುದ್ದೆಗಳಿಗೆ ೨೫ ವರ್ಷ ಕಳೆದರೂ ಇದುವರೆಗೂ ಯಾರೂ ನೇಮಕಗೊಂಡಿಲ್ಲ. ಹೆಸರಿಗೆ ಮಾತ್ರ ಇರುವ ಒಬ್ಬ ಅಧೀಕ್ಷಕ ಅಧಿಕಾರಿ ಕೂಡಿಗೆ ರೇಷ್ಮೆ ಕ್ಷೇತ್ರದ ನಿರ್ವಹಣೆ ಮಾಡಬೇಕಾಗಿದೆ. ಕಳೆದ ೧೫ ವರ್ಷಗಳಿಂದ ಹೊರ ಜಿಲ್ಲೆಯ ಸಹಾಯಕ ನಿರ್ದೇಶಕರನ್ನು ಪ್ರಬಾರವಾಗಿ ನೇಮಿಸಲಾಗಿದ್ದು, ಹೊಸ ಅಧಿಕಾರಿ ನೇಮಕಾತಿ ಇದುವರೆಗೂ ಆಗಿಲ್ಲ!
ಜಿಲ್ಲೆಯಲ್ಲಿ ೩೫ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರು ಸೋಮವಾರಪೇಟೆ ತಾಲೂಕಿನಲ್ಲಿದ್ದಾರೆ, ಈ ವ್ಯಾಪ್ತಿಯ ಮೂರು ತಾಂತ್ರಿಕ ಕೇಂದ್ರ, ಮೂರು ರೇಷ್ಮೆ ಸೇವಾ ಕೇಂದ್ರಗಳು ಹೆಸರಿಗೆ ಮಾತ್ರವಿದೆ. ಸೋಮವಾರಪೇಟೆ ವಿಸ್ತರಣಾ ಕೇಂದ್ರ ಮತ್ತು ಕೊಡ್ಲಿಪೇಟೆ ವಿಸ್ತರಣಾ ಕೇಂದ್ರಗಳು ಸಹ ಮುಚ್ಚಿದ ಹಿನ್ನೆಲೆಯಲ್ಲಿ ರೈತರು ಬೇರೆ ಜಿಲ್ಲೆಯ ರೈತರ ಅನುಭವದ ಮಾಹಿತಿ ಪಡೆದುಕೊಂಡು ರೇಷ್ಮೆ ಬೇಸಾಯ ಮಾಡುತ್ತಿದ್ದಾರೆ.
ಕಳೆದ ೧೫ ವರ್ಷಗಳ ಹಿಂದೆ ೧೭ ಮಂದಿ ಸಿಬ್ಬಂದಿಗಳು ಈ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು, ಆದರೆ ಕಳೆದ ೬ ವರ್ಷಗಳ ಹಿಂದೆ ೧೫ ಮಂದಿ ನಿವೃತ್ತಿ ಹೊಂದಿದರು, ಇತ್ತೀಚಿನ ದಿನಗಳಲ್ಲಿ ಕಳೆದ ಜೂನ್ ತಿಂಗಳಲ್ಲಿ ಇದ್ದ ಇಬ್ಬರಲ್ಲಿ ಒಬ್ಬರು ನಿವೃತ್ತಿ ಹೊಂದಿದರು. ಪ್ರಸ್ತುತ ಕೇವಲ ಓರ್ವ ಸಿಬ್ಬಂದಿ ಮಾತ್ರ ಇದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಬೇಕಾಗುವ ತರಬೇತಿಯನ್ನು ನೀಡುವವರೇ ಇಲ್ಲದಂತಾಗಿದೆ. ಹೊರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಹ ಕೊಡಗು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಈಗಿನ ಸಿಬ್ಬಂದಿ ಒಬ್ಬರೇ ಆದರೂ ಸಹ ದಿನಗೂಲಿ ಕಾರ್ಮಿಕರನ್ನು ಕರೆದುಕೊಂಡು ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ರೇಷ್ಮೆ ಬೆಳೆದ ಕೆಲ ರೈತರ ಮನೆಗಳಿಗೆ ಹೋಗಿ ತಮ್ಮಿಂದ ಆಗುವಷ್ಟು ಮಾಹಿತಿಯನ್ನು ರೈತರಿಗೆ ನೀಡುತ್ತಿದ್ದಾರೆ. ವಾಣಿಜ್ಯ ಬೆಳೆಯ ಮಾದರಿಯಲ್ಲಿ ಇರುವ ರೇಷ್ಮೆ ಬೆಳೆಯನ್ನು ಸೋಮವಾರಪೇಟೆ, ಕುಶಾಲನಗರ ತಾಲೂಕಿನ ಕೂಡುಮಂಗಳೂರು, ಚಿಕ್ಕತ್ತೂರು, ಗುಡ್ಡೆಹೊಸೂರು, ಯಡವನಾಡು, ಶಿರಂಗಾಲ, ಅಳುವಾರ, ತೊರೆನೂರು, ಸೀಗೆಹೊಸೂರು, ಭುವನಗಿರಿ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲಾ ಪ್ರದೇಶಗಳಿಗೆ ತೆರಳಿ ಅವರುಗಳಿಗೆ ಬೆಳೆ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಂದು ಕೆಜಿ ರೇಷ್ಮೆ ಗೂಡಿಗೆ ಎರಡು ಸಾವಿರದಿಂದ ಮೂರು ಸಾವಿರದವರೆಗೂ ಬೆಲೆ ಇದೆ. ಇಂದಿನ ಯುವಕರು, ರೈತರು ಮತ್ತು ಮಹಿಳಾ ರೈತರು ರೇಷ್ಮೆ ಬೆಳೆಯತ್ತ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ತರಬೇತಿ ಪಡೆಯಲು ಇಚ್ಚಿಸಿದರೂ ತರಬೇತಿ ನೀಡುವ ಅಧಿಕಾರಿಗಳೇ ಇಲ್ಲದಂತಾಗಿದೆ.
ಕೂಡಿಗೆ ರೇಷ್ಮೆ ಕ್ಷೇತ್ರದಲ್ಲಿರುವ ೧೦ಕ್ಕೂ ಹೆಚ್ಚು ಕಟ್ಟಡಗಳು ಮೂಲೆ ಗುಂಪಾಗಿ ಕಾಡು ಪಾಲಾಗುವುದರ ಜೊತೆಗೆ ಬೀಳುವ ಹಂತದಲ್ಲಿವೆ.
ವಿದ್ಯಾವAತ ನಿರುದ್ಯೋಗಿ ಯುವಕರು ರೇಷ್ಮೆ ಬೆಳೆಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆಯಲು ಮುಂದಾಗಿದ್ದಾರೆ. ಅದರಿಂದಾಗಿ ಸರಕಾರ ಜಿಲ್ಲಾ ಪಂಚಾಯಿತಿ ಮೂಲಕವಾದರೂ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ತಾಲೂಕಿನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಬೆಳೆಯುವ ಬಗ್ಗೆ ತರಬೇತಿ ನೀಡಲು ಮುಂದಾಗಬೇಕಿದೆ. ಅಲ್ಲದೆ ಮೂಲ ತಳಿಗೆ ಹೆಚ್ಚು ಒತ್ತು ಕೊಡುವ ಕೆಲಸವಾಗಬೇಕಾಗಿದೆ ಎನ್ನುತ್ತಾರೆ ಈ ಭಾಗದ ನೂರಾರು ರೇಷ್ಮೆ ಬೆಳೆಗಾರರು.
ಕೂಡಿಗೆ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಇರುವ ೨೩ ವಸತಿ ಗೃಹಗಳನ್ನು ಬೇರೆ, ಬೇರೆ ಇಲಾಖೆಯವರಿಗೆ ಬಾಡಿಗೆ ರೂಪದಲ್ಲಿ ನೀಡಿರುವ ಹಿನ್ನೆಲೆಯಲ್ಲಿ ವಸತಿ ಗೃಹಗಳು ಮಾತ್ರವೇ ಉಳಿದುಕೊಂಡಿವೆ. ತರಬೇತಿ ಕೇಂದ್ರ, ಮೊಟ್ಟೆ ಸಾಕಾಣಿಕೆ ಕೇಂದ್ರ, ಚಾಕಿ ಕೇಂದ್ರಗಳು ಕಾಡುಪಾಲಾಗುತ್ತಿವೆ. ಕೂಡಿಗೆ ಕೇಂದ್ರದಲ್ಲಿ ರೇಷ್ಮೆ ಇಲಾಖೆಯ ಜಾಗವನ್ನು ಉಳಿಸಿಕೊಂಡು ಅದನ್ನು ಉಪಯೋಗಿಸಿಕೊಂಡು ರೇಷ್ಮೆ ಬೆಳೆಗೆ ಅನುಕೂಲವಾಗುವ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟು ಬೆಳೆಸಿ ಹುಳುಗಳನ್ನು ಸಾಕಿದರೆ ಮಾತ್ರ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯ ಹೆಸರು ಉಳಿಯುತ್ತದೆ. ಇಲ್ಲವಾದರೆ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯನ್ನು ಮುಚ್ಚಬೇಕಾಗುತ್ತದೆ.
ಈ ಹಿಂದೆ ಕೂಡಿಗೆಯಲ್ಲಿನ ರೇಷ್ಮೆ ಮೊಟ್ಟೆಗೆ ಹೆಚ್ಚು ಬೇಡಿಕೆಯಿತ್ತು. ಕೂಡಿಗೆ ಅರೆ ಮಲೆನಾಡು ಪ್ರದೇಶದ ಹಿನ್ನೆಲೆಯಲ್ಲಿ ಈ ಕೇಂದ್ರದ ರೇಷ್ಮೆ ಮೊಟ್ಟೆಗಳಿಗೆ ರಾಜ್ಯದ ರೈತರುಗಳಿಂದ ಹೆಚ್ಚು ಬೇಡಿಕೆ ಬರುತ್ತಿತ್ತು. ಮೊದಲು ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಆದರೆ ಸಿಬ್ಬಂದಿಗಳ ಕೊರತೆ, ಅಧಿಕಾರಿಗಳ ನೇಮಕವಿಲ್ಲದೆ ಎಲ್ಲಾ ವ್ಯವಸ್ಥೆಗಳು ಹಾಳಾಗುವುದರ ಜೊತೆಗೆ ಕೇಂದ್ರದ ಕಟ್ಟಡಗಳು ಕಾಡುಮಯವಾಗುತ್ತಿವೆ. ಈ ಕೇಂದ್ರದಲ್ಲಿ ಬೆಳೆಸಲಾಗುತ್ತಿದ್ದ ರೇಷ್ಮೆ ಮೊಟ್ಟೆಗಳನ್ನು ರಾಮನಗರ, ಚನ್ನಪಟ್ಟಣ, ಕೋಲಾರ, ಹಾಸನ ಜಿಲ್ಲೆಗಳಿಂದಲೂ ರೈತರು ಆಗಮಿಸಿ ಕೊಂಡೊಯ್ಯುತ್ತಿದ್ದ ಕಾಲ ಈಗ ಮರೆಯಾಗಿದೆ.
ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ರೇಷ್ಮೆ ಮಾರುಕಟ್ಟೆಯು ಸಹ ಸ್ಥಗಿತಗೊಂಡ ನಂತರ ಇದೀಗ ಈ ಕಟ್ಟಡದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಮತ್ತು ಸಂಚಾರಿ ಪೊಲೀಸ್ ಠಾಣೆ ನಡೆಯುತ್ತಿದೆ.
ಜಿಲ್ಲೆಯ ರೇಷ್ಮೆ ಕೃಷಿ ಕ್ಷೇತ್ರವಾದ ಕೂಡಿಗೆಯಲ್ಲಿ ಸರಕಾರದ ನಿರ್ಲಕ್ಷö್ಯದಿಂದಾಗಿ ಹಾಗೂ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕೊರತೆಯಿಂದ ರೇಷ್ಮೆ ಇಲಾಖೆಯ ೩೦ ಎಕರೆಗಳಷ್ಟು ಪ್ರದೇಶದಲ್ಲಿ ೧೦ ಎಕರೆ ಪ್ರದೇಶವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ, ೫ ಎಕರೆ ಪ್ರದೇಶವನ್ನು ಉಗ್ರಾಣ ನಿರ್ಮಾಣಕ್ಕೆ ನೀಡಲಾಗಿದೆ. ೧೨ ಎಕರೆ ಪ್ರದೇಶದಲ್ಲಿ ಅಧಿಕಾರಿಗಳ ವಸತಿ ಗೃಹಗಳಿದ್ದು, ಉಳಿದ ೩ ಎಕರೆ ಪ್ರದೇಶದ ಪೈಕಿ ಒಂದು ಎಕರೆಯಲ್ಲಿ ಒಬ್ಬನೇ ಸಿಬ್ಬಂದಿ ದಿನ ಕೂಲಿ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ಹೊಸ ಮಾದರಿಯ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟು ಬೇಸಾಯ ಮಾಡುತ್ತಿದ್ದಾರೆ. ಈ ಕೇಂದ್ರಕ್ಕೆ ಹಾಸನದಿಂದ ರೇಷ್ಮೆ ಮೊಟ್ಟೆಗಳನ್ನು ತಂದು ಗೂಡನ್ನು ಬೆಳೆಯಲಾಗುತ್ತಿದೆ.
ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಈಗಿರುವ ಒಬ್ಬ ಸಿಬ್ಬಂದಿಯೂ ನಿವೃತ್ತಿಗೊಂಡು ಜಿಲ್ಲೆಯಲ್ಲಿರುವ ರೇಷ್ಮೆ ಇಲಾಖೆ ಅವನತಿಯಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲು ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು ಮುಂದಾಗಿ ಕೊಡಗು ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರನ್ನು ಹಾಗೂ ರೇಷ್ಮೆ ಇಲಾಖೆಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು ಎಂಬುದು ರೇಷ್ಮೆ ಬೆಳೆಗಾರರ ಒತ್ತಾಯವಾಗಿದೆ.
-ಕೆ.ಕೆ.ನಾಗರಾಜಶೆಟ್ಟಿ