ಕಣಿವೆ, ಜ. ೩೦ : ಗ್ರಾಮಸಭೆಗೆ ಅಧಿಕಾರಿಗಳು ಬಾರದ ಕಾರಣ ಸಭೆಯನ್ನು ರದ್ದುಗೊಳಿಸಿ ಮುಂದೂಡಿದ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ಮಂಗಳವಾರ ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಗೆ ಕೃಷಿ, ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಗೈರಾದ್ದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಗೈರಾಗಿರುವ ಅಧಿಕಾರಿಗಳು ಬರುವ ತನಕ ಸಭೆ ಆರಂಭವಾಗಲು ಬಿಡುವುದಿಲ್ಲ. ಕೂಡಲೇ ಅವರನ್ನು ಕರೆಸಿ ಎಂದು ಗ್ರಾ.ಪಂ. ಪಿಡಿಓ ಹಾಗೂ ಸಭೆಯ ನೋಡಲ್ ಅಧಿಕಾರಿಯನ್ನು ಒತ್ತಾಯಿಸಿದರು.
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ದುಬಾರೆ ಹೆದ್ದಾರಿಯ ಬದಿಯಲ್ಲಿ ಸೂಕ್ತ ಚರಂಡಿ ಇಲ್ಲದೇ ಸಮಸ್ಯೆಗಳು ಉಲ್ಭಣಗೊಂಡಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಭೆಯನ್ನು ಮುಂದೂಡಲಾಯಿತು.
ಪ್ರಮುಖವಾಗಿ ಲೋಕೋಪ ಯೋಗಿ ಇಲಾಖೆಗೆ ಸಂಬAಧಿಸಿದ ಹಲವಾರು ಸಮಸ್ಯೆಗಳಿವೆ. ಆದರೆ ಕಳೆದ ೪ ವರ್ಷಗಳಿಂದ ಲೋಕೋಪಯೋಗಿ ಅಭಿಯಂತರರು ಗ್ರಾಮಸಭೆಗೆ ಪಾಲ್ಗೊಂಡಿಲ್ಲ ಎಂದು ಗ್ರಾಮಸ್ಥರಾದ ನಂಗಾರು ಜಗ, ಶಶಿಕುಮಾರ್, ಸಂತೋಷ್, ರವಿ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.
ಗುಡ್ಡೆಹೊಸೂರು-ರಸಲ್ಪುರ ರಸ್ತೆ ಕಾಮಗಾರಿ ಸಂದರ್ಭ ರಸ್ತೆ ಬದಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಅಧಿಕಾರಿ ಬದಲಿಗೆ ಅವರ ಸಹಾಯಕರು ಸಭೆಯಲ್ಲಿ ಪಾಲ್ಗೊಂಡಲ್ಲಿ ಅವರಿಂದ ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಕಡ್ಡಾಯವಾಗಿ ಸಭೆಗೆ ಕರೆಸುವಂತೆ ಒತ್ತಾಯಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಟ್ಟು ಮಾದಪ್ಪ, ಪಿಡಿಓ ಸುಮೇಶ್ ಸೇರಿದಂತೆ ಸದಸ್ಯರುಗಳು ಇದ್ದರು.