ಪೊನ್ನಂಪೇಟೆ, ಜ. ೨೯ : ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮ ಕಾರ್ಮಾಡುವಿನ ಬಾಲಕಿಯರ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಕಾಂಪೌAಡ್ ಒಳಗೆ ಇದ್ದ ಗಂಧದ ಮರವನ್ನು ಕಡಿದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ತಾ. ೨೮ ರ ತಡ ರಾತ್ರಿ ವಸತಿ ಶಾಲೆಯ ಗೇಟಿನ ಸಮೀಪವೇ ಇರುವ ಗಂಧದ ಮರದ ಕೊಂಬೆಗಳನ್ನು ಕಡಿದು ಬೀಳಿಸಿ, ಗರಗಸದಿಂದ ಗಂಧದ ಮರದ ಬುಡವನ್ನು ಕುಯ್ಯುವ ಪ್ರಯತ್ನ ನಡೆಸಿ ಹಾಗೆಯೇ ಬೀಡಲಾಗಿದೆ. ಬೀದಿ ನಾಯಿಗಳು ಬೊಗಳುವ ಶಬ್ದ ಕೇಳಿ ಮರ ಕುಯ್ಯುವುದನ್ನು ನಿಲ್ಲಿಸಿ ಓಡಿ ಹೋಗಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಪೊನ್ನಂಪೇಟೆ ವಲಯ ಉಪ ಅರಣ್ಯಾಧಿಕಾರಿ ದಿವಾಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ನಿಲಯ ಮತ್ತು ಸಮೀಪದಲ್ಲಿಯೇ ಇರುವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿ ಸಿ ಕ್ಯಾಮರ ಅಳವಡಿಸಲಾಗಿದ್ದರೂ, ಎರಡೂ ಸಿಸಿ ಕ್ಯಾಮರಗಳು ಕಾರ್ಯ ನಿರ್ವಹಿಸದೆ ಇರುವ ಕಾರಣ ಕಳ್ಳರ ಪತ್ತೆಯಾಗಿಲ್ಲ.