ಮಡಿಕೇರಿ, ಜ. ೨೯: ದಕ್ಷಿಣ ಕೊಡಗಿನ ಗಡಿಭಾಗವಾದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲೆಸಿರುವವರು ಶೇ.೯೦ಕ್ಕೂ ಅಧಿಕ ಮಂದಿ ರೈತರೇ ಆಗಿದ್ದಾರೆ. ಈ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆ - ಗಾಳಿ ಹೆಚ್ಚಿರುವುದು, ವಿದ್ಯುತ್ ಸಮಸ್ಯೆ, ಮೊಬೈಲ್ ನೆಟ್ವರ್ಕ್ ಸಮಸ್ಯೆಗಳು ಸಾಮಾನ್ಯ. ಬಿರುನಾಣಿ, ಪರಕಟಗೇರಿ, ತೆರಾಲು, ಬಾಡಗರಕೇರಿ, ಪೊರಾಡು ಗ್ರಾಮಗಳನ್ನು ಈ ಪಂಚಾಯಿತಿ ಹೊಂದಿದೆ. ಇಲ್ಲಿನ ನೂರಾರು ರೈತರು ಹಲವಾರು ಜಾನುವಾರುಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ. ದನ-ಕರುಗಳು, ಶ್ವಾನಗಳು, ಹಂದಿ, ಕೋಳಿ, ಕುರಿಗಳನ್ನೂ ಜನರು ಸಾಕುತ್ತಿದ್ದಾರೆ. ಆದರೆ ಇವುಗಳಿಗೆ ತುರ್ತು ಸಂದರ್ಭದಲ್ಲಿ ಆರೈಕೆ - ಶುಶ್ರೂಷೆ ನೀಡಲು ಇಲ್ಲಿ ಪಶುವೈದ್ಯಾಧಿಕಾರಿಗಳು ಇಲ್ಲದೆ ವರ್ಷಗಳೇ ಉರುಳಿವೆ.
ಮುಖ್ಯವಾದ ವಿಚಾರವೆಂದರೆ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಚಿಕಿತ್ಸಾಲಯವೊಂದನ್ನು ನಿರ್ಮಿಸಲಾಗಿದೆ. ೨೦೨೦-೨೧ನೇ ಸಾಲಿನ ಆರ್.ಐ.ಡಿ.ಎಫ್. ನಬಾರ್ಡ್-೨೪ ಯೋಜನೆ ಅಡಿಯಲ್ಲಿ ಹಲವು ಲಕ್ಷ ವೆಚ್ಚದಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣವಾಗಿದೆ. ಈ ಕಟ್ಟಡ ಕೆಲಸದ ಬಗ್ಗೆ ಕಳಪೆ ಎಂಬ ಆರೋಪವಿದ್ದರೂ ಮೇಲ್ನೋಟಕ್ಕೆ ಸುಂದರವಾಗಿದೆ. ಪಶು ಚಿಕಿತ್ಸಾಲಯಕ್ಕೆ ಎಂದು ನಿರ್ಮಿಸಲಾಗಿರುವ ಈ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಮೂರು - ನಾಲ್ಕು ವರ್ಷಗಳು ಕಳೆದಿದ್ದರೂ, ಇದು ಇನ್ನೂ ಉಪಯೋಗಕ್ಕೆ ಮಾತ್ರ ಬಂದಿಲ್ಲ. ಕಟ್ಟಡದ ಉದ್ಘಾಟನೆಯೂ ನಡೆದಿಲ್ಲ. ಇದರೊಂದಿಗೆ ಪಶು ವೈದ್ಯಾಧಿಕಾರಿಗಳೂ ಇಲ್ಲಿಗೆ ಇಲ್ಲ. ಶ್ರೀಮಂಗಲ- ಕುಟ್ಟದ ಜವಾಬ್ದಾರಿ ಇರುವ
(ಮೊದಲ ಪುಟದಿಂದ) ವೈದ್ಯರೊಬ್ಬರು ಯಾವತ್ತಾದರೂ ಬಂದು ಹೋಗುತ್ತಾರೆ. ಆದರೆ, ಇದರ ಮಾಹಿತಿ ಜನತೆಗೆ ಇರುವುದಿಲ್ಲ. ಐದು ಗ್ರಾಮಗಳ ಜನರಿಗೆ ತಮ್ಮ ಜಾನುವಾರುಗಳ ಆರೈಕೆಗೆ ಸಮಸ್ಯೆ ನಿರಂತರವಾಗಿದೆ. ಬಹುತೇಕ ರೈತರೇ ಇದ್ದು, ಸಾಕಷ್ಟು ಜಾನುವಾರುಗಳು ಇರುವ ಈ ಪ್ರದೇಶದಲ್ಲಿ ಪಶು ಚಿಕಿತ್ಸಾಲಯ ನಿರ್ಮಿಸಿರುವುದು ಸ್ವಾಗತಾರ್ಹವೇ ಆಗಿದ್ದರೂ, ಮೂರು- ನಾಲ್ಕು ವರ್ಷ ಕಳೆದರೂ, ಕಟ್ಟಡವೇ ಉದ್ಘಾಟನೆಗೊಳ್ಳದಿರು ವುದರಿಂದ ಯಾವುದೇ ಪ್ರಯೋಜನವಿಲ್ಲ ದಂತಾಗಿದೆ. ಹಿಂದಿನ ಶಾಸಕರ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಇದೀಗ ಅವರು ಅಧಿಕಾರದಲ್ಲಿಲ್ಲ. ನೂತನ ಶಾಸಕರಾದರೂ ಈ ಅವಶ್ಯಕತೆಯನ್ನು ಅರಿತು ಕಾರ್ಯೋನ್ಮುಖವಾಗುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಟ್ಟಡ ಉದ್ಘಾಟನೆಯೊಂದಿಗೆ ಪಶುವೈದ್ಯರೂ ನಿಯೋಜಿತರಾದರೆ ಮಾತ್ರ ಇದು ಪ್ರಯೋಜನಕ್ಕೆ ಬರಲಿದೆ.
-ಶಶಿ ಸೋಮಯ್ಯ.