ಗೋಣಿಕೊಪ್ಪಲು, ಜ. ೩೦: ಅಧಿಕಾರಕ್ಕೆ ಬೇಕಾದ ಸಂಖ್ಯಾಬಲ ಹೊಂದಿದ್ದರೂ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡು ಮುಜುಗರಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ತಮ್ಮ ಪಕ್ಷದ ಸದಸ್ಯರನ್ನು ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿಸಿದ ಘಟನೆ ವರದಿಯಾಗಿದೆ.
ತಾ.೨೯ ರಂದು ಪ್ರತಿಷ್ಠಿತ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು.
ಗೆಲುವಿಗೆ ಬೇಕಾದ ಮತಗಳು ಬಿಜೆಪಿ ಪಕ್ಷದಲ್ಲಿ ಇದ್ದರೂ ಅನಿರೀಕ್ಷಿತ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಗೋಣಿಕೊಪ್ಪ ಶಕ್ತಿ ಕೇಂದ್ರದ ಸುರೇಶ್ ರೈ ಮುಂದಾಳತ್ವದಲ್ಲಿ ದ.ಕೊಡಗಿನ ಬೆಕ್ಕೆಸೊಡ್ಲೂರು ಬಳಿಯ ಮಂದತವ್ವ ದೇವಾಲಯ ಹಾಗೂ ಹಾತೂರು ಬಳಿಯ ವನ ಭದ್ರಕಾಳಿ ದೇವರ ಮುಂದೆ ಬಿಜೆಪಿ ಬೆಂಬಲಿತ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಲಾಯಿತು.
ಬಿಜೆಪಿ ಬೆಂಬಲಿತ ೧೨ ಮಂದಿ ಗ್ರಾ.ಪಂ. ಸದಸ್ಯರು ಆಣೆ ಪ್ರಮಾಣದಲ್ಲಿ ಪಾಲ್ಗೊಂಡು, ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿದರಾದರೂ ಯಾರು ಕೂಡ ತಪ್ಪು ಒಪ್ಪಿಕೊಳ್ಳಲು ಮುಂದಾಗಿಲ್ಲ.
ದೇವಾಲಯದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ನೂರೇರ ರಂಜಿ, ಮಂಜು ರೈ, ಸುಬ್ರಮಣಿ, ಮಧನ್ ಶೆಟ್ಟಿ, ಜ್ಯೋತಿ, ಅಕ್ಷಯ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಮತದಾನ ಮುನ್ನಾ ಆಣೆ ಪ್ರಮಾಣ
ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಗೋಣಿಕೊಪ್ಪ ಗ್ರಾ.ಪಂ.ನಲ್ಲಿ ಆದ ಕಹಿ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಪೊನ್ನಂಪೇಟೆಯ ಬಸವೇಶ್ವರ ದೇವಾಲಯದಲ್ಲಿ ಪೊನ್ನಂಪೇಟೆ ಗ್ರಾ.ಪಂ.ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ನಂತರ ದೇವರ ಮುಂದೆ ಆಣೆ ಪ್ರಮಾಣ ಮಾಡಿಸಿ ಅಲ್ಲಿಂದ ಗ್ರಾಮ ಪಂಚಾಯಿತಿಗೆ ತೆರಳಿದ್ದರು.
ಆದರೆ ಚುನಾವಣೆ ನಡೆದ ನಂತರ ಫಲಿತಾಂಶ ಮತ್ತೆ ಕಾಂಗ್ರೆಸ್ ಪರವಾಗಿಯೆ ಬಂದಿದ್ದು, ಇದರಿಂದ ದೇವರ ಮುಂದೆ ನಡೆಸಿದ ಆಣೆ ಪ್ರಮಾಣಕ್ಕೆ ಸದಸ್ಯರು ಗೌರವ ನೀಡದಂತಾಗಿದೆ. ಒಟ್ಟಿನಲ್ಲಿ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಂಚಾಯಿತಿಯಲ್ಲಿ ಕಳೆದ ಬಾರಿ ಅಧಿಕಾರ ನಡೆಸಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಇದೀಗ ಎರಡನೇ ಅವಧಿಯಲ್ಲಿ ಹಿನ್ನಡೆ ಅನುಭವಿಸಿರುವುದು ಸೋಜಿಗವೆನಿಸಿದೆ.
-ಹೆಚ್.ಕೆ. ಜಗದೀಶ್