ಚೆಯ್ಯಂಡಾಣೆ, ಜ. ೩೦: ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ತಾ.೨೮ ರಂದು ಧ್ವಜಾರೋಹಣ ನೆರೆವೇರಿಸುವ ಮೂಲಕ ಉರೂಸ್‌ಗೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಡಪಾಲ ಜಮಾಅತ್ ಮಾಜಿ ಅಧ್ಯಕ್ಷ ಬಷೀರ್ ಮಾತನಾಡಿ, ಉರೂಸ್ ಸಮಾರಂಭದಿAದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ, ಎಲ್ಲರೂ ಒಟ್ಟಾಗಿ ಭಾಗವಹಿಸುವ ಮೂಲಕ ಸೌಹಾರ್ದತೆಗೆ ಉರೂಸ್ ಸಾಕ್ಷಿಯಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಯು. ಶಾಫಿ ನಾವೆಲ್ಲರೂ ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳಬೇಕು. ಕಚ್ಚಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಜಿಲ ಮುದರಿಸ್ ನಿಝರ್ ಅಹ್ಸನಿ ಕಕ್ಕಡಿಪುರಂ ಅಂಡತ್ ಮಾನಿ ಮಖಾಂ ಇತಿಹಾಸ ಪ್ರಸಿದ್ಧವಾಗಿದೆ ಎಂದರು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಮಾತನಾಡಿ, ಎಡಪಾಲ ಅಂಡತ್ ಮಾನಿ ದರ್ಗಾದ ಪುಣ್ಯ ಕಾರ್ಯಗಳನ್ನು ಸ್ಮರಿಸಿದರು. ಕೇರಳದ ಖ್ಯಾತ ವಾಗ್ಮಿ ಅಬಿದ್ ಹುದವಿ ತಚ್ಚಣ್ಣ ಧಾರ್ಮಿಕ ಮತಪ್ರವಚನಕ್ಕೆ ನೇತೃತ್ವ ವಹಿಸಿ ಮಾತನಾಡಿದರು.

ಪ್ರಾರ್ಥನೆಯನ್ನು ಮುದರಿಸ್ ನಿಝರ್ ಫೈಝಿ ನೆರವೇರಿಸಿದರು. ಜಮಾಅತ್ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ, ಸಿನಾನ್ ಶರಫಿ, ಹಂಝ ಹಾಗೂ ಸಿದ್ದಿಕ್ ಮುಸ್ಲಿಯಾರ್ ನಿರೂಪಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಇ. ಮಮ್ಮದ್, ಸುಬೈರ್ ಸಿ.ಇ, ಅಬ್ದುಲ್ ರಜಾಕ್ ಫೈಝಿ, ಸದರ್ ಮುಹಲಿಮ್ ಹಮೀದ್ ಫೈಝಿ ಹಾಗೂ ವಿವಿಧ ಸಾಮಾಜಿಕ, ರಾಜಕೀಯ, ಉಲಮಾ ನೇತಾರರು ಉಪಸ್ಥಿತರಿದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಅಶ್ರಫ್