ನಾಪೋಕ್ಲು, ಜ. ೨೮: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರುÀ ಶವವಾಗಿ ಪತ್ತೆಯಾಗಿದ್ದಾರೆ. ಮೂರ್ನಾಡು ನಿವಾಸಿ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ದಿ. ಮುತ್ತಣ್ಣ ಅವರ ಪುತ್ರ ಪೂಣಚ್ಚ (೩೭) ತಾ. ೨೩ ರಿಂದ ಕಾಣೆಯಾಗಿದ್ದರು. ಈ ಬಗ್ಗೆ ಅವರ ಅಣ್ಣ ಕಿಶೋರ್ ಮೂರ್ನಾಡಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಲ್ಕು ದಿನಗಳಿಂದ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಭಾನುವಾರ ಕೊಡಂಬೂರಿನ ತೆಕ್ಕಡ ಮುತ್ತಣ್ಣ ಮಾಸ್ಟರ್ ಎಂಬವರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಮುತ್ತಣ್ಣ ಮಾಸ್ಟರ್ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮಧ್ಯಾಹ್ನ ಶವವನ್ನು ಕಂಡು ಮುತ್ತಣ್ಣ ಮಾಸ್ಟರ್ ಅವರಿಗೆ ವಿಷಯವನ್ನು ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಮೂರ್ನಾಡು ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀನಿವಾಸ್, ಸಿಬ್ಬಂದಿ ರಾಜಾರಾಮ್ ಖಾಲಿದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅವರು ನಾಪತ್ತೆಯಾಗಿದ್ದ ಪೂಣಚ್ಚ ಅವರ ಶವವೆಂದು ದೃಢಪಟ್ಟಿದೆ. ಮೃತ ಪೂಣಚ್ಚ ವಿವಾಹಿತರಾಗಿದ್ದು, ಇತ್ತೀಚೆಗೆ ಅವರ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಪೊಲೀಸರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿ ಮಹಜರು ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.