ಸುಂಟಿಕೊಪ್ಪ, ಜ. ೨೮: ಗ್ರಾಮಗಳ ಕಸವನ್ನು ಜನವಾಸಿಗಳ ಕಾಲೋನಿಗೆ ಸುರಿಯಲಾಗುತ್ತಿದೆ, ಸೂರು ನೀಡುತ್ತಿಲ್ಲ, ರಸ್ತೆ, ಬೀದಿ ದೀಪ ಕಾಮಗಾರಿ ನಡೆಯುತ್ತಿಲ್ಲ, ಉದ್ಯೋಗ ಖಾತ್ರಿ ಕಾಮಗಾರಿ ಕಳಪೆಯಾಗಿದೆ, ಕೆರೆ ಸ್ವಚ್ಛತಾ ಕಾಮಗಾರಿ ಅಪೂರ್ಣಗೊಂಡಿದೆ, ಜನಸಾಮಾನ್ಯರ ಅರ್ಜಿಗೆ ಸ್ಪಂದನ ಸಿಗುತ್ತಿಲ್ಲ ಎಂದು ಹರದೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹರದೂರು ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಟಿ.ಪಿ. ಉಷಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಗ್ರಾ.ಪಂ. ಆಡಳಿತ ವೈಖರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕಳೆದ ೧ ವರ್ಷದಿಂದ ಗ್ರಾಮ ಸಭೆ ನಡೆದಿಲ್ಲ. ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ನೀಡುವವರೇ ಇಲ್ಲದಾಗಿದೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮದ ರಸ್ತೆ ಅಗಲೀಕರಣಕ್ಕೆ ಅರ್ಜಿ ನೀಡಿ ೧೦ ವರ್ಷಗಳಾದರೂ ಪ್ರಯೋಜನವಾಗಿಲ್ಲ, ಬಡವರಿಗೆ ಸರಕಾರದಿಂದ ದೊರಕುತ್ತಿರುವ ಆಶ್ರÀ್ರಯ, ಬಸವ, ಅಂಬೇಡ್ಕರ್, ಇಂದಿರಾ ಅವಾಜ್, ಪ್ರಧಾನಮಂತ್ರಿ ವಿಶೇಷ ಅನುದಾನದಡಿ ಸಿಗುವ ಮನೆಗಳು ಲಭ್ಯವಾಗಿಲ್ಲ ಎಂದು ಗ್ರಾಮಸ್ಥರಾದ ನಾಣಯ್ಯ (ಪಟ್ಟು), ಮಧು, ಗಣೇಶ, ಲೀಲಾವತಿ, ಉಲ್ಲಾಸ್ ಪಂಚಾಯಿತಿ ಆಡಳಿತ ವಿರುದ್ಧ ಹರಿಹಾಯ್ದರು. ಊರುಡುವೆ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಅರಣ್ಯ ಹಕ್ಕು ಸಮಿತಿಯಿಂದ ಮನೆ ಮಂಜುರಾತಿಗೆ ಅನುಮೋದನೆ ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿ ಮಾಡದೆ ಅಧ್ಯಕ್ಷೆಯ ಮನೆ ಮುಂಭಾಗದ ರಸ್ತೆ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಈ ತಾರತಮ್ಯ ಯಾಕೆ ? ಎಂದು ಧನಂಜಯ, ನೀಲಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ನಾಲೆ ಹೂಳೆತ್ತುವ ಕಾರ್ಯ ಕಳಪೆಯಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ. ಇದನ್ನು ತನಿಖೆಗೆ ಒಳಪಡಿಸಬೇಕೆಂದು ಗ್ರಾಮಸ್ಥರಾದ ಚೇತನ ಒತ್ತಾಯಿಸಿದರು. ಅರಣ್ಯಾಧಿಕಾರಿ ಜಗದೀಶ್ ಮಾತನಾಡಿ, ಊರುಡುವೆ ಜಾಗದ ಸಮಸ್ಯೆಗೆ ಅರಣ್ಯ ಇಲಾಖೆಯಿಂದ ಜಾಗ ಪರಿಶೀಲಿಸಿ ಅರಣ್ಯ ಹಕ್ಕು ಸಮಿತಿಗೆ ಸಮಾಜ ಕಲ್ಯಾಣ ಹಾಗೂ ಗ್ರಾಮ ಪಂಚಾಯಿತಿಗೆ ವರದಿ ಶೀಘ್ರದಲ್ಲೇ ಸಲ್ಲ್ಲಿಸಲಾ ಗುವುದೆಂದರು. ಗುಂಡುಗುಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಗಳ ಹಾವಳಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲೆಯ ಹೆಂಚು ಗಳನ್ನು ಮಂಗಗಳು ಒಡೆದು ಹಾಕುತ್ತಿವೆ. ಅರಣ್ಯ ಇಲಾಖೆಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ಮುಖ್ಯ ಶಿಕ್ಷಕಿ ಗೌರಮ್ಮ ಹೇಳಿದರು. ಚಿನ್ನಳ್ಳಿ ಕೆರೆ ಸ್ವಚ್ಛತೆ ಕಾಮಗಾರಿ ಕೆಲಸ ಕಳಪೆಯಾಗಿದೆ ಎಂಬಿತ್ಯಾದಿ ದೂರುಗಳ ಸುರಿಮಳೆಯನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ. ಉಷಾ, ನೋಡಲ್ ಅಧಿಕಾರಿಯಾದ ಸೋಮ ವಾರಪೇಟೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ್ ಭರತ್ ಗ್ರಾಮಸ್ಥರ ಸಮಸ್ಯೆಗಳಿಗೆ ಹಂತಹAತವಾಗಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದೆಂದು ಭರವಸೆ ಇತ್ತರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸಲಾಮ್, ಸದಸ್ಯರಾದ ಎ.ಸಿ. ಸುಬ್ಬಯ್ಯ, ಬಿ.ಡಿ. ಪದ್ಮನಾಭ, ಕುಸುಮಾ, ಮುಸ್ತಾಫ, ಕೆ.ಕೆ. ರಮೇಶ್, ಸರೋಜ, ಉಷಾ, ಬೋಜಮ್ಮ, ಪಿ.ಡಿ.ಓ. ಪೂರ್ಣಿಮಾ, ಕಾರ್ಯದರ್ಶಿ ನವ್ಯ ಕೆ.ಪಿ., ಸಿಬ್ಬಂದಿ ರವಿ, ರಮ್ಯ, ಪವಿತ್ರ, ಸಂತೋಷ್, ಸಂದ್ಯಾ, ಅರಣ್ಯ ಇಲಾಖೆ ಅಧಿಕಾರಿ ಜಗದೀಶ್, ಆರೋಗ್ಯ ಅಧಿಕಾರಿ ಶಿವಣ್ಣ, ಗ್ರಾಮ ಲೆಕ್ಕಾಧಿಕಾರಿ ದೀಪಿಕ ಇತರರು ಹಾಜರಿದ್ದರು.