ಮಡಿಕೇರಿ, ಜ. ೨೯: ಪರಿಶಿಷ್ಟ ಜಾತಿಗೆ ಸೇರುವ ತುಳು ಭಾಷಿಕ ಸಮುದಾಯಗಳಿಗೆ ಸೇರಿದವರಿಗೆ ನೀಡುವ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ‘ಆದಿದ್ರಾವಿಡ’ ಎಂದು ಮಾತ್ರ ನಮೂದಿಸಬೇಕೆಂದು ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ. ಸೋಮಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಭಾಗದಿಂದ ಕೆಲಸಕ್ಕೆಂದು ಜಿಲ್ಲೆಗೆ ಬಂದ ತುಳು ಭಾಷಿಕ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಸಾಮೂಹಿಕವಾಗಿ ‘ಆದಿದ್ರಾವಿಡ’ ಎಂದು ಜಾತಿ ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಬೇಕು. ಆದರೆ, ದೃಢೀಕರಣ ಪತ್ರದಲ್ಲಿ ಪಾಲೆ, ಪೆರಿಯರ್, ಮೊಗೇರ, ಆದಿಕರ್ನಾಟಕ ಹೀಗೆ ಬೇರೆ ಬೇರೆಯ ಜಾತಿ ಹೆಸರುಗಳನ್ನು ನಮೂದಿಸಲಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಒಂದೇ ಕುಟುಂಬದ ಸಹೋದರರಿಗೆ ಬೇರೆ ಬೇರೆ ಜಾತಿ ಹೆಸರು ಬಂದಿರುವ ಉದಾಹರಣೆಗಳು ಇವೆ. ಇದರಿಂದ ಸರಕಾರದ ಯೋಜನೆ ಪಡೆಯಲು ಸಮಸ್ಯೆಯಾಗುತ್ತಿದೆ. ಹಲವು ಬಾರಿ ಈ ಬಗ್ಗೆ ಗಮನಸೆಳೆದರು ಸಮಸ್ಯೆ ಬಗೆಹರಿಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಪೈಸಾರಿ ಜಾಗವನ್ನು ಸಮಗ್ರವಾಗಿ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಿ ವಸತಿ ರಹಿತರಿಗೆ ನಿವೇಶನ ಒದಗಿಸಬೇಕು. ಜಿಲ್ಲೆಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.