ಮಡಿಕೇರಿ, ಜ. ೨೯: ದೇವರಸ್ಥಾನದಲ್ಲಿ ಪೂಜಿಸುವ ಅಶ್ವತ್ಥ ವೃಕ್ಷಕ್ಕೆ ನೆಲ್ಲಿಕಾಯಿ ಗಿಡ ದೊಂದಿಗೆ ಮದುವೆ ಮಾಡಿಸುವ ವಿಶೇಷ ಕಾರ್ಯಕ್ರಮ ಫೆಬ್ರವರಿ ೪ ರಂದು ಕಡಗದಾಳು ಸಮೀಪ ನಡೆಯಲಿದೆ ಎಂದು ಬೊಟ್ಲಪ್ಪ ಯುವಸಂಘದ ಪ್ರಮುಖರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಪಿ.ಎಂ. ಶಿವಕಾಂತ್, ಅಂದು ಬೆಳಿಗ್ಗೆ ೯.೫೦ಕ್ಕೆ ಮೀನಾ ಲಗ್ನದಲ್ಲಿ ವೃಕ್ಷಗಳ ರಾಜ, ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಅಶ್ವತ್ಥ ವೃಕ್ಷದ ವಿವಾಹ ಕಾರ್ಯಕ್ರಮ ಸಂಪ್ರದಾಯ ಬದ್ಧವಾಗಿ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಿದರು.
ಸಂಘದ ಖಜಾಂಜಿ ಅವಿನಾಶ್ ಬೊಟ್ಲಪ್ಪ ಮಾತನಾಡಿ, ೧೯೯೫ರಲ್ಲಿ ಸ್ಥಾಪನೆಯಾದ ಬೊಟ್ಲಪ್ಪ ಯುವ ಸಂಘ ೧೦ ವರ್ಷ ಪೂರೈಸಿದ ಸವಿನೆನಪಿಗೆ ೨೦೦೩ರಲ್ಲಿ ಯುವಸಂಘದ ಆವರಣದಲ್ಲಿ ಅಶ್ವತ್ಥ ಗಿಡವನ್ನು ನೆಡಲಾಗಿತ್ತು. ಆ ಸಂದರ್ಭದಲ್ಲಿ ಹಿರಿಯರ, ಧಾರ್ಮಿಕ ಪಂಡಿತರ ಸಲಹೆ ಮೇರೆಗೆ ಮರಕ್ಕೆ ಸಕಲ ಪೂಜೆಯೊಂದಿಗೆ ಉಪನಯನವನ್ನು ನಡೆಸಲಾಗಿತ್ತು. ಉಪನಯನ ಮಾಡಿದವರು ಗಿಡ ನೆಟ್ಟು ೨೧ ವರ್ಷದ ನಂತರ ವೃಕ್ಷಕ್ಕೆ ವಿವಾಹ ಮಾಡಬೇಕೆಂದು ತಿಳಿಸಿದ್ದರು. ಇದರಿಂದ ಊರು ಉದ್ಧಾರವಾಗುತ್ತದೆ ಎಂಬ ನಂಬಿಕೆ ಇದೆ. ವಿವಾಹ ಕಾರ್ಯಕ್ರಮ ಹಿಂದೂ ಸಂಪ್ರದಾಯದAತೆ ನಡೆಯಲಿದ್ದು, ಅಶ್ವತ್ಥ ವೃಕ್ಷ ವರ, ನೆಲ್ಲಿಕಾಯಿ ಗಿಡ ವಧು ಸ್ಥಾನದಲ್ಲಿರುತ್ತದೆ. ಮರಗಳನ್ನು ಸಿಂಗಾರಗೊಳಿಸಿ, ಮಂತ್ರಘೋಷ, ಮಂಗಳವಾದ್ಯ ಸಹಿತ ವಿವಾಹ ಕಾರ್ಯ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಅಧ್ಯಕ್ಷ ಪಿ.ಎಂ. ಸುರೇಶ್, ಹಿರಿಯ ಸದಸ್ಯ ರಾಜಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಉದಯ್ ಹಾಜರಿದ್ದರು.