ಮಡಿಕೇರಿ, ಜ. ೨೯: ಕೊಡಗು ಗೌಡ ಯುವವೇದಿಕೆ ವತಿಯಿಂದ ಏಪ್ರಿಲ್ ನಲ್ಲಿ ನಡೆಯಲಿರುವ ಹತ್ತು ಕುಟುಂಬ ಹದಿನೆಂಟು ಗೋತ್ರದ ಕ್ರಿಕೆಟ್ ಲೀಗ್ ಪಂದ್ಯಾಟ ಅಂಗವಾಗಿ ಅರೆಭಾಷೆ ಸಂಸ್ಕೃತಿ, ಜೀವನ ಶೈಲಿ ಬಿಂಬಿಸುವ ನೃತ್ಯ ರೂಪಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದರು.
ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮಾತನಾಡಿ, ಏಪ್ರಿಲ್ ೨೬, ೨೭, ೨೮ಕ್ಕೆ ಗ್ರಾಮ ಮಟ್ಟದ ನೃತ್ಯ ರೂಪಕ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಅರೆಭಾಷೆ ಜನಾಂಗದ ಸಂಸ್ಕೃತಿಯನ್ನು ಬಿಂಬಿಸಬೇಕು. ನೃತ್ಯ ರೂಪಕದಲ್ಲಿ ಬಳಸುವ ಹಾಡು ಕಡ್ಡಾಯವಾಗಿ ಅರೆಭಾಷೆಯದ್ದೆ ಆಗಿರಬೇಕು. ೧೦ ನಿಮಿಷದ ಕಾಲಾವಧಿಯಲ್ಲಿ ನೃತ್ಯ ರೂಪಕ ಪ್ರದರ್ಶಿಸಬಹುದಾಗಿದ್ದು, ತಂಡದಲ್ಲಿ ಕನಿಷ್ಟ ೫, ಗರಿಷ್ಠ ೧೫ ಮಂದಿ ಭಾಗವಹಿಸಬಹುದಾಗಿದೆ. ಒಂದು ಗ್ರಾಮದಿಂದ ಎಷ್ಟು ತಂಡಗಳು ಬೇಕಾದರು ಸ್ಪರ್ಧೆಗೆ ಭಾಗವಹಿಸಬಹುದಾಗಿದೆ ಎಂದು ವಿವರಿಸಿದರು.
ವಿಜೇತ ತಂಡಕ್ಕೆ ರೂ. ೫೦ ಸಾವಿರ ನಗದು, ಆಕರ್ಷಕ ಟ್ರೋಫಿಯೊಂದಿಗೆ ‘ಗೌಡ ನಟರಾಜ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ನೋಂದಾಣಿಗೆ ಮಾರ್ಚ್ ೩೦ ಕೊನೆ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ೯೦೦೮೧೯೮೯೫೫, ೯೪೮೨೧೯೭೨೦೦, ೮೮೬೭೦೨೧೧೬೭, ೯೫೩೫೯೧೫೯೧೬ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್ ತಿಮ್ಮಯ್ಯ, ನಿರ್ದೇಶಕ ದೇರಳ ನವೀನ್ ಹಾಜರಿದ್ದರು.