ವೀರಾಜಪೇಟೆ, ಜ. ೨೬: ಸ್ವಾತಂತ್ರ‍್ಯ ಎನ್ನುವುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ‍್ಯ ಸಾಕ್ಷಾತ್ಕಾರಗೊಂಡಾಗ ಮಾತ್ರ ಪ್ರಜಾಪ್ರಭುತ್ವ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವ ಎಂದು ಹೇಳಿದ್ದು. ಸಂವಿಧಾನದ ಈ ಆಶಯವನ್ನು ಸಾಕಾರಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದರು.

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಆಡಳಿತ ವತಿಯಿಂದ ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆದ ೭೫ನೆ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವತಃ ತಾನೆ ಆಳಿಕೊಳ್ಳುವ ಪವಿತ್ರ ದಿನ ಇದಾಗಿದೆ. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕಾಗಿದೆ. ದೇಶದ ಅಭಿವೃದ್ದಿ ಪ್ರತಿಯೊಬ್ಬ ಪ್ರಜೆಯ ಆಶಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು. ಸಂವಿಧಾನೇತರ ಶಕ್ತಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಸಂಸದೀಯ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕೂಡಾ ಹೌದು. ಇಂತಹವರನ್ನು ತಿರಸ್ಕರಿಸುವುದು ಪ್ರತಿಯೊಬ್ಬ ಪ್ರಜೆಯ ಧರ್ಮವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು ಎಂದರು.

ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ‍್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ. ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊAದು ಸಂವಿಧಾನವನ್ನು ನಮಗೆ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.

ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಹೆಚ್. ಎನ್.ರಾಮಚಂದ್ರ ಧ್ವಜವಂದನೆ ಸ್ವೀಕರಿಸಿ ಗಣ ರಾಜ್ಯೋತ್ಸವದ ಸಂದೇಶ ನೀಡಿ, ಅಖಂಡ ಭಾರತದ ಆಡಳಿತಕ್ಕೆ ಅಗತ್ಯವಾದ ಸೂಕ್ತ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ದಿನಾಚರಣೆ ಮಾಡಲಾಗುತ್ತದೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ, ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ, ಸಭೆ ಮಾಡಿ ಪರಿಶೀಲನೆ ಮಾಡಿ ಸತತ ಪರಿಶ್ರಮದ ಮೂಲಕ ಸಂವಿಧಾನವನ್ನು ರಚಿಸಿ ಅಖಂಡ ಭಾರತಕ್ಕೆ ಅರ್ಪಿಸಿದ್ದಾರೆ. ಸಂವಿಧಾನದಲ್ಲಿ ಪೂರ್ವ ಪೀಠಿಕೆಯು ಸಂವಿಧಾನ ದಿಕ್ಸೂಚಿಯಾಗಿದೆ. ಪ್ರಜಾಪ್ರಭುತ್ವ ರಾಷ್ಟçವಾದ ಭಾರತವು ೭೪ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾನವಾಗಿ ಬದುಕುವ ಹಕ್ಕು ಮತ್ತು ಸ್ವಾತಂತ್ರ‍್ಯವನ್ನು ಸಂವಿಧಾನವು ನೀಡಿದೆ. ಇದೇ ಆಶಯಗಳೊಂದಿಗೆ ದೇಶ ಮುನ್ನಡೆಯುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ಗೌರವಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ವೇದಿಕೆ ವತಿಯಿಂದ ರಾಜ್ಯ ಪಾಲರಿಂದ ಚಿನ್ನದ ಪದಕ ಪಡೆದ ಬೊಳ್ಳಚಂಡ ಶೃಂಗ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಆಡಳಿತ ವತಿಯಿಂದ ಮಂಜುನಾಥ್, ಪಾರ್ವತಿ, ಕುಪ್ಪು ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಕಂದಾಯ ಇಲಾಖೆ ಪರಿವೀಕ್ಷಕ ಎಂ.ಎಲ್. ಹರೀಶ್, ಶಿಕ್ಷಕ ಎ.ವಿ. ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಎ.ಚಂದ್ರಕುಮಾರ್, ಪುರಸಭೆ ಸದಸ್ಯರುಗಳು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡÀ ಶಂಕರಿ ಪೊನ್ನಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡÀ ಹರೀಶ್ ಹಾಗೂ ನಿರ್ದೇಶಕರುಗಳು, ವೀರಾಜಪೇಟೆ ನ್ಯಾಯಾಲಯದ ಅಪರ ಸರಕಾರಿ ಅಭಿಯೋಜಕ ನರೇಂದ್ರ ಕಾಮತ್ ಸೇರಿದಂತೆ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಪಿಎನ್‌ಎಮ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಲಾಲ್ ಕುಮಾರ್ ಹಾಗೂ ವಿದ್ಯಾರ್ಥಿಗಳಿಂದ ರೈತಗೀತೆ ಪ್ರಸ್ತುತಪಡಿಸಲಾಯಿತು.

ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ರಾಷ್ಟಿçÃಯ ಭಾವೈಕ್ಯತೆ ಮತ್ತು ದೇಶಭಕ್ತಿ ಸಾರುವ ಹಾಡುಗಳಿಗೆ ಆಕರ್ಷಕ ನೃತ್ಯ ಮಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ನೃತ್ಯ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಸಮಾರಂಭದಲ್ಲಿ ವೀರಾಜಪೇಟೆಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ, ಸಾರ್ವಜನಿಕರು ಹಾಜರಿದ್ದರು.