ಶನಿವಾರಸಂತೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಪುಟ್ಟ ಪಟ್ಟಣ. ಪಟ್ಟಣ ಪುಟ್ಟದಾದರೂ ಹೆಸರೂ ಮಾತ್ರ ವಿಶ್ವವ್ಯಾಪಿ ಎಂದರೆ ಅತಿಶಯೋಕ್ತಿಯಾಗಲಾರದು. ಹೇಗೆ ಎಂದಿರಾ?

ಸ್ವತAತ್ರ ಭಾರತದ ಪ್ರಥಮ ದಂಡನಾಯಕರಾಗಿ ದೇಶ ರಕ್ಷಣೆಯ ಮೂರು ವಿಭಾಗಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಕೊಡಗಿನ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಜನಿಸಿದ್ದು ಶನಿವಾರಸಂತೆಯಲ್ಲಿ ಇಲ್ಲಿನ ಸರ್ಕಾರಿ ವಸತಿ ಗೃಹದಲ್ಲಿ ಎಂದ ಮೇಲೆ ಹೆಸರು ವಿಶ್ವವ್ಯಾಪಿಯಾಗಿರದೆ?

ಶನಿವಾರಸಂತೆಯ ಕಂದಾಯ ಕಚೇರಿಯಲ್ಲಿ ಸೇವೆಯಲ್ಲಿದ್ದ ಕೊಡಂದೇರ ಮಾದಪ್ಪ ಮತ್ತು ಕಾವೇರಮ್ಮ ದಂಪತಿ ೨ನೇ ಪುತ್ರರಾಗಿ ೧೮೯೯ರ ಜನವರಿ ೨೮ರಂದು ಕಾರ್ಯಪ್ಪ ಅವರು ಜನಿಸಿದ್ದರು. ಭಾರತದ ಮಹಾದಂಡನಾಯಕ ಶನಿವಾರಸಂತೆಯ ಪುಟ್ಟಮನೆಯಲ್ಲಿ ಜನಿಸಿದ್ದು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ.

ಆದರೆ ಈ ಪುಟ್ಟ ಮನೆ ಇಂದು ಏನಾಗಿದೆ ಗೊತ್ತೆ? ಕಾರ್ಯಪ್ಪ ಅವರು ಜನಿಸಿದ ಮನೆ ಇಂದು ಸಾರ್ವಜನಿಕ ಗ್ರಂಥಾಲಯವಾಗಿದೆ. ಅದಕ್ಕೂ ಮೊದಲು ಅದು ನಾಡಕಚೇರಿಯಾಗಿತ್ತು. ನಾಡಕಚೇರಿ ಗ್ರಂಥಾಲAiÀiವಾಗಿ ಮಾರ್ಪಟ್ಟಾಗ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಎಂ.ಸಿ ನಾಣಯ್ಯ ಅವರು ಜಿಲ್ಲಾ ಉಸ್ತುವಾರಿ ಹಾಗೂ ವಾರ್ತಾ ಮತ್ತು ಪ್ರಚಾರ ಖಾತೆ ಮಂತ್ರಿಯಾಗಿದ್ದರು. ಇಂದು ಈ ಕಟ್ಟಡ ಸೋರುತ್ತಿದೆ, ಕಟ್ಟಡದ ಮುಂಭಾಗದಲ್ಲಿ ತೂಗು ಹಾಕಿರುವ ಫಿ.ಮಾ.ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯ ಎಂಬ ಫಲಕ ಮಾತ್ರ ಆ ಕಟ್ಟಡ ಕಾರ್ಯಪ್ಪ ಅವರು ಜನಿಸಿದ ಮನೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಸೋಜಿಗವೆಂದರೆ ಗ್ರಂಥಾಲಯದಲ್ಲಿ ಕಾರ್ಯಪ್ಪ ಅವರ ಒಂದು ಭಾವಚಿತ್ರ ಸಹ ಇಲ್ಲವಾಗಿದೆ.

೨೦೧೦ರಲ್ಲಿ ಶನಿವಾರಸಂತೆಯಲ್ಲಿ ನಡೆದ ೭ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಪ್ಪ ಜನಿಸಿದ ಮನೆಯನ್ನು ಅಭಿವೃದ್ಧಿಪಡಿಸಿ ಸ್ಮಾರಕ ಮಾಡಬೇಕು. ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿ ಈವರೆಗೂ ಈಡೇರಲಿಲ್ಲ. ಸಮ್ಮೇಳನಕ್ಕೆ ಆಗಮಿಸಿದ್ದ ಅಂದಿನ ಅಧ್ಯಕ್ಷ ನಲ್ಲೂರು ಪ್ರಸಾದರ ನಿರ್ಣಯವೂ ನೆನೆಗುದಿಗೆ ಬಿದ್ದಿದೆ. ಸಚಿವರ, ಶಾಸಕರ ಭರವಸೆ ಹುಸಿಯಾಗಿದೆ. ಜನಪ್ರತಿನಿಧಿಗಳ ದಿವ್ಯ ಮೌನದಿಂದ ಕಾರ್ಯಪ್ಪ ಹುಟ್ಟಿದ ಮನೆ ಸ್ಮಾರಕವಂತೂ ಆಗಲಿಲ್ಲ. ಲೋಕಾರ್ಪಣೆಗೊಂಡ ಗ್ರಂಥಾಲಯವೂ ಗ್ರಂಥಪಾಲಕರಿಲ್ಲದೇ ಮುಚ್ಚುವ ಸ್ಥಿತಿ ತಲುಪಿದೆ. ಮಹಾದಂಡನಾಯಕ ಜನಿಸಿದ ಊರಿನಲ್ಲಿ ಅವರ ನೆನಪಿಗಾಗಿ ಯಾವುದೇ ಸ್ಮಾರಕ ನಿರ್ಮಿಸಲು ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಹಾಗೂ ಸೇನಾಧಿಕಾರಿಗಳಾಗಲಿ ಮುಂದೆ ಬಾರದಿರುವುದು ಸ್ಥಳೀಯ ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ. ಕೊಡಗಿನ ಮತ್ತೋರ್ವ ಸೇನಾ ನಾಯಕ ಜನರಲ್ ತಿಮ್ಮಯ್ಯ ಅವರು ಜನಿಸಿದ ಮನೆ ಇಂದು ಜ.ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯವಾಗಿ ಪರಿವರ್ತನೆಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾರ್ಯಪ್ಪ ಜನಿಸಿದ ಮನೆಯೂ ಸ್ಮಾರಕವಾಗಿ ಪರಿವರ್ತನೆಗೊಳ್ಳಲಿ ಎಂದು ಆಶಿಸೋಣ. ಮುಂದೆಯಾದರು ಕಾರ್ಯಪ್ಪ ಅವರು ಜನಿಸಿದ ಮನೆಯನ್ನು ಸ್ಮಾರಕವಾಗಿಸಿ ಸುತ್ತಲೂ ಉದ್ಯಾನವನ ನಿರ್ಮಿಸಿ ಆ ಮಹಾ ಯೋಧನ ಪ್ರತಿಮೆಯನ್ನು ಮುಂಭಾಗದಲ್ಲಿ ನಿರ್ಮಿಸಿ ವೀಕ್ಷಣಾ ಸ್ಥಳವಾಗಿ ಪರಿವರ್ತಿ ಸಿದರೆ ಅದು ವೀರ ಸೇನಾನಿಗೆ ಸಲ್ಲಿಸುವ ನಮನವಾದೀತು.

-ಶ.ಗ. ನಯನತಾರಾ, ಶನಿವಾರಸಂತೆ