ಮಡಿಕೇರಿ/ ವೀರಾಜಪೇಟೆ, ಜ. ೨೫: ದ್ವಿತೀಯ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಕೊಡಗು ಜಿಲ್ಲೆಗೆ ಇಂದು ಪ್ರಥಮ ಬಾರಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆಗಳಲ್ಲಿ ಸುಮಾರು ರೂ. ೩೫೦ ಕೋಟಿ ಅಂದಾಜು ವೆಚ್ಚದ ೪೦ ಯೋಜನೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ಎರಡೂ ಕಡೆ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವು ತನ್ನ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಭರವಸೆ ಈಡೇರಿಸಿದೆ ಎಂದರು. ಆದರೆ, ಕೇಂದ್ರದ ಮೋದಿ ನೇತೃತ್ವದ ಸರಕಾರ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ಹುಸಿಯಾಗಿಸಿದೆ. ಜಾತಿ- ಮತಗಳನ್ನು ವಿಭಜಿಸಿ ಗೊಂದಲ ಮೂಡಿಸಿದೆ. ಅಲ್ಲದೆ, ಕೇಂದ್ರದ ಈಗಿನ ಆಡಳಿತದಲ್ಲಿ ಅತ್ಯಧಿಕ ಸಾಲ ಮಾಡಿ ದೇಶಕ್ಕೆ ಹೊರೆ ಹೊರಿಸಲಾಗಿದೆ. ರಾಜ್ಯದ ಹಿಂದಿನ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಕೊಡಗಿನ ಬಿಜೆಪಿಯ ಇಬ್ಬರು ಮಾಜಿ ಶಾಸಕರು, ಈಗಿನ ಸಂಸದರು ಜಿಲ್ಲೆಯ ಜನತೆ ನಿರೀಕ್ಷಿಸಿದ ಸಾಧನೆಗೈದಿಲ್ಲ ಎಂದು ತೀವ್ರ ಟೀಕಾ ಪ್ರಹಾರಗೈದರು. ಮುಖ್ಯಮಂತ್ರಿಯವರ ಆಗಮನ ನಿಗದಿತ ವೇಳೆಗಿಂತ ತಡವಾದರೂ, ಜಿಲ್ಲೆಯಲ್ಲಿ ಹೂಮಳೆಯ ಸ್ವಾಗತ ದೊರಕಿತು. (೬ನೇ ಪುಟ ನೋಡಿ)ಮಡಿಕೇರಿ/ವೀರಾಜಪೇಟೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ಕಾರ್ಯಕರ್ತರಲ್ಲಿ ನವಚೈತನ್ಯ ತುಂಬುವ ಮೂಲಕ ಜಿಲ್ಲೆಯಲ್ಲಿ ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು. ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಹಾಗೂ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಹಾಗೂ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ಬೆಂಕಿಯುAಡೆ ಉಗುಳಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದರು. ದೇಶದ ಪ್ರಗತಿಗೆ ಬಿಜೆಪಿ ಕೊಡುಗೆ ನಗಣ್ಯ ಎಂದು ಕಿಡಿಕಾರಿದ ಅವರು, ಮುಂದಿನ ಲೋಕಸಭಾ ಚುನಾವಣೆ ಗೆಲುವೆ ನಮ್ಮ ಗುರಿಯಾಗಿರಬೇಕೆಂದು ಸಂದೇಶ ನೀಡಿದರು.
ವೀರಾಜಪೇಟೆ : ಸ್ವಾತಂತ್ರö್ಯ ಪೂರ್ವದಲ್ಲಿದ್ದ ಆರ್.ಎಸ್.ಎಸ್ ಹಾಗೂ ಅಂದಿನ ಜನಸಂಘ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ದೇಶ ಬ್ರಿಟಿಷ್ ದಾಸಮುಕ್ತವಾಗಲು ಕಾಂಗ್ರೆಸ್ ಕಾರಣ ಹೊರತು ಬಿಜೆಪಿ ಅಲ್ಲ. ಅದೇ ರೀತಿ ಅಧಿಕಾರವಿದ್ದಾಗ ಬಿಜೆಪಿ ಒಂದೇ ಒಂದು ಅಣೆಕಟ್ಟನ್ನು ಕಟ್ಟಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿತಗೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿದ ಪಕ್ಷವಾಗಿದೆ. ೧೮೮೫ರಲ್ಲಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ಸ್ಥಾಪನೆಯಾದ ಪಕ್ಷವಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಬ್ರಿಟಿಷ್ ಆಡಳಿತದಲ್ಲಿ ಭಾರತೀಯರಿಗೆ ನ್ಯಾಯ ದೊರಕಿಸುವ ಉದ್ದೇಶದೊಂದಿಗೆ ಪಕ್ಷ ಪ್ರಾರಂಭವಾಯಿತು. ಕ್ರಮೇಣ ಬ್ರಿಟಿಷರ ಆಳ್ವಿಕೆ ಕೊನೆಗಾಣಿಸಿ ದಾಸ್ಯದಿಂದ ಮುಕ್ತಗೊಳಿಸಿ ಭಾರತಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಆಗಿದೆ. ಇಂದಿನ ರಾಜಕೀಯ ಪಕ್ಷಗಳು ಯಾವುವು ಸ್ವಾತಂತ್ರö್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸಾವು-ನೋವು ಅನುಭವಿಸಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಎನ್ನುವುದು ಎಂದೆAದಿಗೂ ಮರೆಯುವಂತಿಲ್ಲ. ಆರ್.ಎಸ್.ಎಸ್. ಅಥವಾ ಜನಸಂಘವಾಗಲಿ ದೇಶದ ಸ್ವಾತಂತ್ರö್ಯಕ್ಕೆ ಹೋರಾಡಿಲ್ಲ. ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ನೀಡಿದ್ದು, ಕಾಂಗ್ರೆಸ್. ಇಂದು ಬಿಜೆಪಿಗರು ದೇಶಾಭಿಮಾನದ ಮಾತನಾಡುತ್ತಾರೆ. ಅಂದು ಸ್ವಾತಂತ್ರö್ಯಕ್ಕೆ ಯಾಕೆ ಹೋರಾಡಿಲ್ಲ. ಅಂದು ರಾಷ್ಟç ಭಕ್ತಿ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ದೇಶಭಕ್ತಿಗೆ ಬದ್ಧವಾಗಿರುವುದು ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಎಂದರು.
ದೇಶದಲ್ಲಿ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಬಿಜೆಪಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದ್ದು, ತೋರಿಸಿದರೆ ಅವರ ವಿರುದ್ಧ ಮಾತನಾಡುವುದೇ ನಿಲ್ಲಿಸುತ್ತೇನೆ. ನೀರಾವರಿ ಮೂಲಕ ಆಹಾರ ಉತ್ಪಾದನೆ ಮಾಡಿ ಹಸಿರು ಕ್ರಾಂತಿ ಮಾಡಿದ್ದು, ನಾಗರಿಕತೆ, ಸಮಾನತೆ, ಅವಕಾಶ ನೀಡಿದ ಸಂವಿಧಾನ ನೀಡಿದ್ದು ಕಾಂಗ್ರೆಸ್. ಆದರೆ, ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಿಜೆಪಿಯ ಅನಂತಕುಮಾರ್ ಹೆಗ್ಗಡೆ ಹೇಳುತ್ತಾರೆ. ಸಂವಿಧಾನದ ಬಗ್ಗೆ ಅವರಿಗೆ ಗೌರವವಿಲ್ಲ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಜಾತ್ಯತೀತ ರಾಷ್ಟçದ ಆಶಯವಿದೆ. ಈ ಹಿನ್ನೆಲೆ ಬಿಜೆಪಿ ವಿರೋಧ ಮಾಡುತ್ತದೆ. ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಬಿಜೆಪಿಗೆ ದೇಶದಲ್ಲಿ ಆಡಳಿತ ಮಾಡುವ ಹಕ್ಕಿದೆಯ ಎಂದು ಜನ ತೀರ್ಮಾನ ಮಾಡಬೇಕಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪ್ರಣಾಳಿಕೆಯಲ್ಲಿದ್ದ ೧೫೫ ಭರವಸೆ ಈಡೇರಿಸಿ ಹೆಚ್ಚಿನ ಯೋಜನೆಯನ್ನು ಜಾರಿ ಮಾಡಿದ್ದೇನೆೆ. ೬೦೦ ಭರವಸೆ ನೀಡಿದ್ದ ಬಿಜೆಪಿ ಶೇ. ೧೦ ಮಾತ್ರ ಈಡೇರಿಸಿತು. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ನುಡಿದಂತೆ ನಡೆದಿಲ್ಲ. ೨ ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನರೇಂದ್ರ ಮೋದಿ ಈಡೇರಿಸಿದ್ದೀರಾ.? ಬೆಲೆ ಏರಿಕೆ ನಿಯಂತ್ರಿಸಿ ‘ಅಚ್ಛೆ ದಿನ್’ ತರುತ್ತೇವೆ ಎಂದಿದ್ರು..ಬAತ..?ಇAಧನ, ಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಎಲ್ಲಿಗೆ ತಲುಪಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಲ್ಲಿಗೆ ಹೋಯಿತು ಎಂದು ಕೇಂದ್ರ ಸರಕಾರ ಹಾಗೂ ಪ್ರಧಾನಿ ವಿರುದ್ಧ ಮೇಲಿಂದ ಮೇಲೆ ವಾಗ್ದಾಳಿ ಮೂಲಕ ಟೀಕಿಸಿದರು.
೫ ಗ್ಯಾರಂಟಿ ಬಗ್ಗೆ ಮೊದಲು ಹೇಳಿದರೆ ಈ ಯೋಜನೆ ಜಾರಿ ಅಸಾಧ್ಯ ಮಡಿಕೇರಿ : ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆ ಕಾಲಾವಧಿ ಮುಗಿಯುವ ಸಂದರ್ಭ ದೇಶದ ಸಾಲ ರೂ. ೫೩ ಲಕ್ಷ ೧೧ ಸಾವಿರ ಕೋಟಿ ಇತ್ತು. ಇದೀಗ ೧೦ ವರ್ಷದ ಅಂತರದಲ್ಲಿ ೧೭೩ ಲಕ್ಷ ಕೋಟಿ ದಾಟಿದೆ. ಇದೇನಾ ನಿಮ್ಮ ‘ಅಚ್ಛೆ ದಿನ್’ (ಒಳ್ಳೆಯ ದಿನ) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ. ಕೇಂದ್ರ ಸರಕಾರ ೨ ಕೋಟಿಯಲ್ಲ, ೨ ಲಕ್ಷ ಉದ್ಯೋಗವನ್ನು ಇದುವರೆಗೂ ಸೃಷ್ಟಿಸಿಲ್ಲ. ಸುಳ್ಳು ಹೇಳಿ ಹಾದಿ ತಪ್ಪಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಇಳಿಸಿ ‘ಅಚ್ಛೆ ದಿನ್’ ತರುತ್ತೇವೆ ಎಂದರು ಆಯ್ತಾ?, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು ಅದು ಈಡೇರಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದೊಯ್ದು ಸಮಾನ ಅವಕಾಶವನ್ನು ಕಲ್ಪಿಸಿಲ್ಲ. ಜಾತ್ಯತೀತ ನಿಲುವನ್ನು ಮೋದಿ ಪ್ರದರ್ಶಿಸಿಲ್ಲ. ಜಾತಿ, ಧರ್ಮದ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರ ತನಿಖೆಗೆ ಆಯೋಗ
ಬಿಜೆಪಿ ಎಂದಿಗೂ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರು, ಸಾಮಾಜಿಕ ನ್ಯಾಯದ ಪರ ಇಲ್ಲ. ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮೀಸಲಾತಿ, ಅಧಿಕಾರ ವಿಕೇಂದ್ರೀಕರಣ, ಸಾಮಾಜಿಕ ನ್ಯಾಯದ ಪರ ಮಾತನಾಡುವುದಿಲ್ಲ. ಮಂಡಲ್ ಆಯೋಗ ವರದಿ ವಿಚಾರದಲ್ಲಿ ರಾಜಕಾರಣ ನಡೆಸಿ ಹತ್ಯಾಕಾಂಡಕ್ಕೆ ಬಿಜೆಪಿ ಕಾರಣವಾಯಿತು. ರಾಜ್ಯದಲ್ಲಿ ಕಳೆದ ಬಾರಿಯಿದ್ದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಗುತ್ತಿಗೆದಾರರು ೪೦% ಸರಕಾರ ಎಂದು ಟೀಕಿಸಿದ್ದರು. ಇದರ ತನಿಖೆಗಾಗಿ ಆಯೋಗ ರಚಿಸಿದ್ದೇವೆ. ಕೊರೊನಾ ಪರಿಸ್ಥಿತಿಯಲ್ಲಿ ಸಲಕರಣೆ ಖರೀದಿಯಲ್ಲಿ ಕೋಟ್ಯಂತರ ಹಣ ಲೂಟಿಯಾಗಿದೆ. ಇದರ ವಿರುದ್ಧದ ತನಿಖೆಗೂ ಕಮೀಷನ್ ರಚಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕೆಂದು ಆಯೋಗ ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
೧೩೯ ಕೋಟಿ ಮಹಿಳೆಯರು ಸರಕಾರಿ ಬಸ್ನಲ್ಲಿ ಇದುವರೆಗೂ ಉಚಿತ ಪ್ರಯಾಣ ಮಾಡಿದ್ದಾರೆ. ತಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದÀರ್ಭ ೭ ಕೆಜಿ ಅಕ್ಕಿ ನೀಡುತ್ತಿದ್ದೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಅದನ್ನು ೫ ಕೆಜಿಗೆ ಕಡಿತಗೊಳಿಸಿತು. ಇದೀಗ ೧೦ ಕೆಜಿ ನೀಡಲು ಮುಂದಾದಾಗ ಬಿಜೆಪಿ ಅಗತ್ಯ ಅಕ್ಕಿ ನೀಡಲು ನಿರಾಕರಿಸಿದೆ. ಇದೀಗ ಅದಕ್ಕೆ ಪರ್ಯಾಯವಾಗಿ ಹಣ ನೀಡಲಾಗುತ್ತಿದೆ. ೧ ಕೋಟಿ ೫೧ ಲಕ್ಷ ಕುಟುಂಬಕ್ಕೆ ಉಚಿತ ವಿದ್ಯುತ್ ಗೃಹಜ್ಯೋತಿ ಮೂಲಕ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಗೃಹಲಕ್ಷ್ಮಿ ಯೋಜನೆ ೧.೧೮ ಕೋಟಿ ಮಹಿಳಾ ಯಜಮಾನಿಯರಿಗೆ ಮಾಸಿಕ ರೂ. ೨ ಸಾವಿರ ನೀಡಿದ್ದೇವೆ. ೨೦೨೨-೨೩ ಸಾಲಿನಲ್ಲಿ ಓದು ಮುಗಿಸಿದ ಪದವೀಧರರಿಗೆ ಯುವನಿಧಿ ಮೂಲಕ ೩ ಸಾವಿರ, ಡಿಪ್ಲೋಮ ಪದವೀಧರರಿಗೆ ೧,೫೦೦ ಹಣ ನೀಡುತ್ತೇವೆ. ೧ ಲಕ್ಷ ನಿರುದ್ಯೋಗಿಗಳು ನೋಂದಾಣಿ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳಿನಿAದ ಹಣ ಡಿಬಿಟಿ ಮೂಲಕ ಪಾವತಿ ಮಾಡುತ್ತೇವೆ. ಈ ಯೋಜನೆಗಳಿಂದ ಹೊಟ್ಟೆ ಉರಿದುಕೊಂಡ ಬಿಜೆಪಿ ಸುಳ್ಳು ಆರೋಪ ಮಾಡಿದೆ.
ಮುಂದಿನ ಲೋಕಸಭೆ ಚುನಾವಣೆಯು ನಮಗೆ ಮುಖ್ಯ . ಮುಂದಿನ ೪ ವರ್ಷ ೪ ತಿಂಗಳು ನಾವೇ ಅಧಿಕಾರದಲ್ಲೇ ಇರುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ವಿಚಾರ ಜಾರಿ ಮಾಡುತ್ತೇವೆ. ಮನೆಮನೆಗೂ ತೆರಳಿ ಸರಕಾರದ ಸಾಧನೆಯನ್ನು ತಲುಪಿಸುವ ಕೆಲಸವಾಗಬೇಕು. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದರು.
ಅಭಿವೃದ್ಧಿ ಕಾರ್ಯಕ್ಕೂ ಒತ್ತು - ಪರಮೇಶ್ವರ್
ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣವಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ನವಚೈತನ್ಯ ಬಂದಿದೆ. ೧೯೮೯ ರ ನಂತರ ಕೊಡಗು ಜಿಲ್ಲೆಗೆ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಸದುದ್ದೇಶದಿಂದ ಸ್ಥಾಪನೆಗೊಂಡ ಕಾಂಗ್ರೆಸ್ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ೧೩೮ ವರ್ಷ ಕಳೆದರೂ ಧ್ಯೇಯೋದ್ದೇಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸ್ವಾತಂತ್ರö್ಯದ ನಂತರ ಬೇರೆ ದೇಶಕ್ಕೆ ಸರಿಸಮಾನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅನೇಕ ಕಾರ್ಯಕ್ರಮ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಉಳುವವನಿಗೆ ಭೂಮಿ ಯೋಜನೆ ಮೂಲಕ ಬಡರೈತ, ಕಾರ್ಮಿಕನಿಗೆ ಅನೇಕ ರೀತಿಯಲ್ಲಿ ಜೀವನಕ್ಕೆ ಶಕ್ತಿ ತುಂಬಿಸುವ ಕೆಲಸ ಮಾಡಿದ್ದೇವೆ. ೫ ಗ್ಯಾರೆಂಟಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನಂಬಿರಲಿಲ್ಲ. ರಾಜ್ಯದ ಜನ ನಂಬಿದರು. ಇದುವರೆಗೆ ರೂ. ೩೬ ಸಾವಿರ ಕೋಟಿ ಖರ್ಚಾಗಿದೆ. ಗ್ಯಾರೆಂಟಿಯೊAದಿಗೆ ಅಭಿವೃದ್ಧಿ ಕಾರ್ಯಕ್ಕೂ ಒತ್ತು ನೀಡಿದ್ದೇವೆ. ದೇಶದಲ್ಲಿ ಸೈಬರ್ ಕ್ರೆöÊಂ, ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ. ಇದರ ತಡೆಗೆ ಎಲ್ಲರೂ ಕೈಜೋಡಿಸಬೇಕು. ಮದ್ಯ ವ್ಯಸನ, ಡ್ರಗ್ಸ್ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದರು.
ಏರ್ಸ್ಟಿçಪ್-ಕಾನೂನು ಕಾಲೇಜು - ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾದ ಬಳಿಕ ಇಬ್ಬರು ಶಾಸಕರೊಂದಿಗೆ ೫ ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲಿನ ನಂಬಿಕೆ ಇರುವುದು ತಿಳಿದು ಬರುತ್ತಿದೆ. ರೂ. ೧೫೦ ಕೋಟಿ ಐದು ಯೋಜನೆ ಮೂಲಕ ನೇರವಾಗಿ ಜಿಲ್ಲೆಯ ಜನರಿಗೆ ತಲುಪಿದೆ. ಕೊಡಗಿನ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಕಳೆದ ಬಜೆಟ್ನಲ್ಲಿ ಏರ್ಸ್ಟಿçಪ್ ಯೋಜನೆ ಘೋಷಣೆಯಾಗಿದ್ದು, ೧೦೦ ಎಕರೆ ಜಾಗವನ್ನು ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆ ಕಾರ್ಯಗತ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕರಿಸಬೇಕು. ಕೊಡವ ಹೆರಿಟೇಜ್, ಕನ್ನಡ ಭವನ ಪೂರ್ಣಗೊಳಿಸಲು ಒತ್ತು ನೀಡಿದ್ದೇವೆ. ಸಂಬAಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಕಾನೂನು ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇದೆ. ಈ ಸಂಬAಧ ಮುಂದಿನ ದಿನಗಳಲ್ಲಿ ಕ್ರಮವಹಿಸುವಂತೆ ಮುಖ್ಯಮಂತ್ರಿಯ ಗಮನ ಸೆಳೆದರು.
ಉಚಿತ ವಿದ್ಯುತ್ ನೀಡಿ - ಮಂಥರ್ ಮನವಿ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ೫ ಗ್ಯಾರೆಂಟಿ ಯೋಜನೆಗಳ ಮೂಲಕ ರೂ. ೮೭ ಕೋಟಿ ಜನರಿಗೆ ತಲುಪಿದೆ. ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಆಗಮಿಸಿದ ಸಂದರ್ಭ ನಡೆದ ಘಟನೆಗೆ ಮತದಾರರು ತಕ್ಕಪಾಠ ಕಲಿಸಿದ್ದಾರೆ. ೨೫ ವರ್ಷದಲ್ಲಿ ಅಭಿವೃದ್ಧಿ ಕೆಲಸಕ್ಕಿಂತ ಭಾಷಣ ಮಾಡುತ್ತಿದ್ದರು. ಟರ್ಫ್ ಮೈದಾನ, ಕಲಾಭವನ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ೫ ವರ್ಷದಲ್ಲಿ ಎಲ್ಲಾ ಕೆಲಸ ಪೂರ್ಣಗೊಳಿಸುತ್ತೇವೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ೧೦ ಹೆಚ್.ಪಿ. ನೀರಾವರಿ ಪಂಪ್ ಸೆಟ್ಗೆ ಉಚಿತ ವಿದ್ಯುತ್ ಒದಗಿಸಬೇಕು ಎಂದು ಮನವಿ ಮಾಡಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ವೆಂಕಟೇಶ್, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಹರೋಜ್ ಖಾನ್, ಹೆಚ್.ಎಸ್. ಚಂದ್ರಮೌಳಿ, ಪ್ರಮುಖರಾದ ಕೆ.ಕೆ. ಮಂಜುನಾಥ್ ಕುಮಾರ್, ವಿ.ಎ. ಲಕ್ಷö್ಮಣ, ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ವಿ.ಪಿ. ಶಶಿಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಸೇರಿದಂತೆ ಇನ್ನಿತರರು ಹಾಜರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ನಿರೂಪಿಸಿ, ವಕ್ತಾರ ತೆನ್ನೀರಾ ಮೈನಾ ವಂದಿಸಿದರು.
ಎರಡೂವರೆ ಗಂಟೆ ತಡವಾಗಿ ಬಂದ ಸಿಎಂ
ನಿಗದಿತ ೧೦.೩೦ಕ್ಕೆ ವೀರಾಜಪೇಟೆಗೆ ಬರಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂವರೆ ಗಂಟೆ ತಡವಾಗಿ ಆಗಮಿಸಿದ ಪರಿಣಾಮ ಕಾರ್ಯಕ್ರಮಗಳ ವೇಳಾಪಟ್ಟಿಗಳೆಲ್ಲ ತಲೆಕೆಳಗಾದವು.
೧ ಗಂಟೆಗೆ ಹೆಲಿಪ್ಯಾಡ್ಗೆ ಬಂದಿಳಿದ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕ ಸಭೆಗೆ ತೆರಳಿದರು. ನಂತರ ಕೊಟ್ಟಮುಡಿಗೆ ತೆರಳಿ ಮಧ್ಯಾಹ್ನ ೨ ಗಂಟೆಗೆ ಮಡಿಕೇರಿಗೆ ಆಗಮಿಸಬೇಕಾದವರು ಸಂಜೆ ೫ ಗಂಟೆಗೆ ಮಡಿಕೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೂ, ಮಡಿಕೇರಿಯಲ್ಲಿ ಸಹಸ್ರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಪೊಲೀಸರು, ಕಾರ್ಯಕರ್ತರು ಹಾಗೂ ಪತ್ರಕರ್ತರು ಕಾದು ಬಸವಳಿದರು.
ಒಂದು ವರ್ಷ ಮೂರು ತಿಂಗಳ ಹಿಂದೆ ವಿಪಕ್ಷ ನಾಯಕನಾಗಿದ್ದ ಸಂದರ್ಭ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಸಿದ್ದರಾಮಯ್ಯ ಅವರು ತೆರಳುತ್ತಿದ್ದ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಅದರ ಪ್ರತಿಯಾಗಿ ಇಂದು ಕಾರ್ಯಕರ್ತರು ಅವರಿಗೆ ಹೂಮಳೆಗೈದು ಅದ್ದೂರಿಯಾಗಿ ಸ್ವಾಗತಿಸಿದರು.
ಮುಖ್ಯಮಂತ್ರಿಯಾಗಿ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ವೀರಾಜಪೇಟೆಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ವೀರಾಜಪೇಟೆ ಪ್ರವೇಶದ್ವಾರದಲ್ಲಿ ಹೂಮಳೆ ಸುರಿಸಿ ಬರಮಾಡಿಕೊಂಡರು.
ಮುಖ್ಯಮಂತ್ರಿ ತೆರಳುತ್ತಿದ್ದ ಕಾರಿಗೆ ಹೂಮಳೆಗೈದ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು. ಬೈಕ್, ಕಾರ್ಗಳಲ್ಲಿ ಜಾಥಾ ನಡೆಸಿ ಸಿದ್ದರಾಮಯ್ಯ ಅವರ ವಾಹನ ಹಿಂಬಾಲಿಸಿದರು. ರೂ. ೧.೪೭ ಕೋಟಿ ಮೌಲ್ಯದ ಐಷಾರಾಮಿ ಬೆನ್ಜ್ ಕಾರನ್ನು ಶಾಸಕ ಎ.ಎಸ್. ಪೊನ್ನಣ್ಣ ಸ್ವತಃ ಡ್ರೆöÊವ್ ಮಾಡಿಕೊಂಡು ಸಿದ್ದರಾಮಯ್ಯ ಅವರಿಗೆ ಸಾರಥಿಯಾದರು.
ಅಂಬಟ್ಟಿಯಿAದ ವೀರಾಜಪೇಟೆಯ ತನ್ನ ನಿವಾಸಕ್ಕೆ ಮುಖ್ಯಮಂತ್ರಿಯನ್ನು ಕರೆದೊಯ್ದ ಪೊನ್ನಣ್ಣ ಅವರು ನಂತರ ಸಂತ ಅನ್ನಮ್ಮ ಶಾಲಾ ಮೈದಾನಕ್ಕೂ ಕರೆದೊಯ್ದರು. ನಂತರ ಮಡಿಕೇರಿಗೂ ಅದೇ ಕಾರ್ನಲ್ಲಿ ಕರೆತಂದರು. ‘ರಂಜನ್, ಬೋಪಯ್ಯ ಕಡೆದು ಕಟ್ಟೆ ಹಾಕಿದ್ದು ಏನು?’
ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಇದ್ದ ೨೦-೨೫ ವರ್ಷ ಏನು ಕಡೆದು ಕಟ್ಟೆ ಹಾಕಿದ್ದಾರೆ. ಅವರು ಏನೂ ಮಾಡಿಲ್ಲ. ಒಬ್ಬರು ವಕೀಲರು, ಒಬ್ಬರು ವೈದ್ಯರು ಇದೀಗ ಶಾಸಕರಾಗಿದ್ದಾರೆ. ಕೊಡಗಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇಬ್ಬರು ಶಾಸಕರು ಕೊಡಗಿನ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಬೋಪಯ್ಯ, ರಂಜನ್ ಬೇಕಾ, ಪೊನ್ನಣ್ಣ, ಮಂಥರ್ ಅಂತವರು ಬೇಕಾ ಎಂದು ಮುಂದೆಯೂ ನಿರ್ಧರಿಸಿ ಎಂದು ಸಿದ್ದರಾಮಯ್ಯ ನೇರವಾಗಿ ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು.