ಮಡಿಕೇರಿ, ಜ. ೨೫: ಮಡಿಕೇರಿ ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ತಾತ್ಕಾಲಿಕ ಅಂಗಡಿ ಮಳಿಗೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ನಗರಸಭೆಗೆ ಭೇಟಿ ನೀಡಿ ಸದಸ್ಯರುಗಳಿಂದ ಅಹವಾಲು ಸ್ವೀಕರಿಸಿ ಮಾತ ನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ತಾತ್ಕಾಲಿಕ ಮಳಿಗೆಗಳು ನಿರ್ಮಾಣ ವಾಗುತ್ತಿರುವ ಬಗ್ಗೆ ಸದಸ್ಯರುಗಳು ಗಮನಕ್ಕೆ ತಂದಿದ್ದಾರೆ. ತೆರಿಗೆ ವಂಚಿಸಲು ವ್ಯಾಪಾರಿಗಳು ಈ ರೀತಿ ಮಾಡುತ್ತಿರುವದಾಗಿ ಕಂಡು ಬರುತ್ತಿದೆ. ಈ ರೀತಿಯಾಗಿ ಮಳಿಗೆಗಳನ್ನು ನಿರ್ಮಾಣ ಮಾಡಲು ಅವಕಾಶವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚೆ ಮಾಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ಸಚಿವರು ಹೇಳಿದರು. ನಗರದಲ್ಲಿ ತಲೆ ಎತ್ತಿರುವ ತಾತ್ಕಾಲಿಕ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಸದಸ್ಯರುಗಳಾದ ಅಮೀನ್ ಮೊಹಿಸಿನ್, ಮನ್ಸೂರ್, ಶ್ವೇತಾ ಅವರುಗಳು ಸಚಿವರ ಗಮನಕ್ಕೆ ತಂದಾಗ ಸಚಿವರು ಆಯುಕ್ತ ವಿಜಯ್ ಅವರನ್ನು ಸಭೆಗೆ ಕರೆಸಿ ಮಾಹಿತಿ ಬಯಸಿದರು. ಈ ಸಂದರ್ಭ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಎರಡು ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದಾಗ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಅವಕಾಶ ನೀಡಬಾರದೆಂದು ನಿರ್ಣಯ ಮಾಡಿದ್ದರೂ ಅದನ್ನು ತಿರುಚಲಾಗಿದೆ ಎಂದು ಶ್ವೇತಾ ಹೇಳಿದರು. ಹೆದ್ದಾರಿ ಬದಿಯಲ್ಲಿ ಹಾಗೂ ಜ.ತಿಮ್ಮಯ್ಯ ವೃತ್ತದ ಬಳಿ ಹೆದ್ದಾರಿ ಪ್ರಾಧಿಕಾರದಿಂದ ಅಳವಡಿಸಲಾಗಿರುವ ರಕ್ಷಣಾ ಬೇಲಿಯನ್ನು ಯಾವದೇ ಅನುಮತಿಯಿಲ್ಲದೆ ತೆರವು ಮಾಡಿ ಮಳಿಗೆ ನಿರ್ಮಾಣ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ, ತಾತ್ಕಾಲಿಕ ಮಳಿಗೆಗಳಿಗೆ ಅವಕಾಶ ನೀಡಲೇಬಾರದು ಎಂದು ಅಮೀನ್ ಮೊಹಿಸಿನ್ ಸಚಿವರಲ್ಲಿ ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಸಚಿವರು; ಅಂತಹ ಮಳಿಗೆಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಮಾನತ್ತಿಗೆ ಒಳಗಾಗುವಿರಿ ಎಂದು ಆಯುಕ್ತರಿಗೆ ಎಚ್ಚರಿಕೆ ನೀಡಿದರು.

ಎರಡು ವಾರದಲ್ಲಿ ಸಿಬ್ಬಂದಿ ನೇಮಕ

ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು; ಸಾಕಷ್ಟು ಸಿಬ್ಬಂದಿಗಳ ಕೊರತೆ ಇರುವದು ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಲಾಗುವದು. ಮುಂದಿನ ಎರಡು ವಾರದಲ್ಲಿ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.

ಶೀಘ್ರ ಸ್ಪಂದಿಸಲು ಸೂಚನೆ

ನಗರಸಭೆಯಲ್ಲಿ ಫಾರಂ-೩, ಪರವಾನಗಿ ನವೀಕರಣ ಮಾಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ, ೩-೪ ತಿಂಗಳಾದರೂ ಸಾರ್ವಜನಿಕರಿಗೆ ದಾಖಲೆಗಳು ಸಿಗುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಇಲ್ಲ ಸಲ್ಲದ ದಾಖಲೆಗಳನ್ನು ಕೇಳಿ ಸತಾಯಿಸ ಲಾಗುತ್ತಿದೆ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಖೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್, ಸದಸ್ಯರುಗಳಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಅಪ್ಪಣ್ಣ ಇತರರು ಸಚಿವರ ಗಮನ ಸೆಳೆದರು. ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಆಯುಕ್ತರಲ್ಲಿ ಸಮಜಾಯಿಷಿಕೆ ಬಯಸಿದಾಗ ಆಯುಕ್ತರು ಸಿಬ್ಬಂದಿಗಳ ಕೊರತೆಯಿಂದಾಗಿ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಸ್ಪಂದಿಸಲು ಆಗುತ್ತಿಲ್ಲ. ಆದರೂ ಎಲ್ಲ ಕೆಲಸಗಳನ್ನು ಮಾಡಲಾಗುತ್ತಿದೆ. ಹೆಚ್ಚಿಗೆ ವಿಳಂಬ ಮಾಡದೆ ದಾಖಲೆಗಳನ್ನು ಒದಗಿಸುತ್ತಿರುವದಾಗಿ ಉತ್ತರಿಸಿದರು. ಸಚಿವರು ಮಾತನಾಡಿ; ಸಾರ್ವಜನಿಕರಿಗೆ ಸರಕಾರಿ ಕೆಲಸ ಕಾರ್ಯಗಳು ಸುಲಭವಾಗಿ ಸಿಗುವಂತಾಗಬೇಕೆAದು ಮುಖ್ಯ ಮಂತ್ರಿಗಳು ಸೂಚನೆ ನೀಡಿದ್ದಾರೆ. ಆದರೆ ಇಲ್ಲಿ ಕೆಲವೊಂದು ಗೊಂದಲಗಳು ಕಾಣುತ್ತಿವೆ. ಜನರಿಗೆ ತೊಂದರೆ ಆದರೆ ಕ್ರಮ ಕೈಗೊಳ್ಳಬೇಕಾಗುತ್ತದೆ, ಹಾಗಾಗಿ ಈ ಬಗ್ಗೆ ಸರ್ವ ಸದಸ್ಯರ ಸಭೆ ಕರೆದು ಗೊಂದಲ ಪರಿಹರಿಸಿಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಶೀಘ್ರ ಸ್ಪಂದನ ನೀಡಬೇಕೆಂದು ಆಯುಕ್ತರಿಗೆ ಸೂಚಿಸಿದರು.

ನಗರದಲ್ಲಿ ದುಸ್ಥಿತಿಯಲ್ಲಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ನಗರೋತ್ಥಾನ ಯೋಜನೆಯಡಿ ಟೆಂಡರ್ ಕರೆದು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವದಾಗಿ ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.

ಇದೇ ಸಂದರ್ಭ ಸಚಿವರನ್ನು ನಗರಸಭೆ ಪರವಾಗಿ ಸನ್ಮಾನಿಸಲಾಯಿತು. ಸದಸ್ಯರುಗಳಾದ ಸಬಿತಾ, ಚಿತ್ರಾವತಿ, ಮೇರಿ ವೇಗಸ್, ನೀಮಾ ಅರ್ಶದ್, ಬಶೀರ್, ಚಂದ್ರಶೇಖರ್ ಇದ್ದರು.