ಸೋಮವಾರಪೇಟೆ, ಜ. ೨೫: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್ನ ತಾಲೂಕು ಘಟಕದ ವತಿಯಿಂದ ತಾ. ೨೬ರಂದು (ಇಂದು) ಪಟ್ಟಣದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಿದ್ಧತೆ ನಡೆದಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಳಕೆಗೆ ಆ್ಯಂಬ್ಯುಲೆನ್ಸ್ ಸೇವೆಯ ಯೋಜನೆಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ನೃತ್ಯ ಸ್ಪರ್ಧೆ, ಸಂಗೀತ ರಸಮಂಜರಿ ಆಯೋಜನೆಗೊಂಡಿದೆ.
ಸೋಮವಾರಪೇಟೆಯಲ್ಲಿ ಕೆಟಿಡಿಓ ಸಂಘಟನೆ ಅಸ್ತಿತ್ವಕ್ಕೆ ಬಂದ ನಂತರ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಪ್ರಸಕ್ತ ೨ನೇ ವರ್ಷದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಮಧ್ಯಾಹ್ನ ೧ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೆಟಿಡಿಓ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ. ರೋಡ್, ಜಿಲ್ಲಾ ಮಾಜೀ ಗೌರವಾಧ್ಯಕ್ಷ ರಫೀಕ್, ತಾಲೂಕು ಗೌರವಾಧ್ಯಕ್ಷ ಉಮೇಶ್, ರೀ ಬಿಲ್ಡ್ ಕೊಡಗು ಫೌಂಡೇಷನ್ನ ಕೆ.ಎ. ಕುಶಾಲಪ್ಪ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಪಿ.ವಿ. ಕೃಷ್ಣ ವಹಿಸಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಬಿ.ವಿ. ರವಿ ತಿಳಿಸಿದ್ದಾರೆ.
ನಂತರ ವಿಶ್ವರೂಪ ಕಲಾತಂಡದಿAದ ಸಂಗೀತ ರಸ ಮಂಜರಿ, ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ. ಅಪರಾಹ್ನ ೩ ಗಂಟೆಗೆ ಕೊಡಗು ಜಿಲ್ಲೆಗೆ ಒಳಪಟ್ಟಂತೆ ೧೪ ವರ್ಷ ಒಳಪಟ್ಟ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಲಿದ್ದು, ಪ್ರಥಮ ೬ ಸಾವಿರ, ದ್ವಿತೀಯ ೫ ಸಾವಿರ, ತೃತೀಯ ೪ ಸಾವಿರ ನಗದು ಸೇರಿದಂತೆ ಆಕರ್ಷಕ ಟ್ರೋಫಿ, ನೃತ್ಯಪಟುಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಸಂಜೆ ೬ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ರಾಮನಗರ ಜಿಲ್ಲೆಯ ಗೆಜ್ಜೆಗಾರುಗುದ್ದೆ ಮಠದ ಶ್ರೀ ಕುಮಾರಸ್ವಾಮೀಜಿ ನೆರವೇರಿಸಲಿದ್ದು, ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಶಾಸಕ ಮಂಥರ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ತಾಲೂಕು ಅಧ್ಯಕ್ಷ ಬಿವಿ ರವಿ, ಜಿಲ್ಲಾಧ್ಯಕ್ಷ ಎಂ.ಜೆ. ವಿನೋದ್, ಉದ್ಯಮಿಗಳಾದ ಅರುಣ್ ಕಾಳಪ್ಪ, ಹರಪಳ್ಳಿ ರವೀಂದ್ರ, vಗಿರೀಶ್ ಮಲ್ಲಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ತರಗತಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಸಾರ್ವಜನಿಕ ಕ್ಷೇತ್ರದ ಸಾಧಕರುಗಳನ್ನು ಸನ್ಮಾನಿಸಲಾಗುವುದು. ತಾಲೂಕು ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗಾಗಿ ನೂತನ ಆ್ಯಂಬ್ಯುಲೆನ್ಸ್ನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ರವಿ ತಿಳಿಸಿದ್ದಾರೆ.
ಸಂಜೆ ೬ ಗಂಟೆ ನಂತರ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ನೃತ್ಯ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನವಾಗಿ ರೂ. ೨೫ ಸಾವಿರ ನಗದು, ದ್ವಿತೀಯ ೧೫ಸಾವಿರ, ತೃತೀಯ ೧೦ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಕಾರ್ಯಕ್ರಮಕ್ಕಾಗಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.