ಚೆಯ್ಯಂಡಾಣೆ, ಜ. ೨೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಕೆ.ಡಿ.ಪಿ. ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ವಹಿಸಿದ್ದರು.

ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮಾತನಾಡಿ, ಮುಂದಿನ ಗ್ರಾಮ ಸಭೆಯ ಮುಂಚಿತವಾಗಿ ಚೆಸ್ಕಾಂ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸ ಬೇಕು, ಮಳೆಗಾಲಕ್ಕೂ ಮುಂಚಿತ ವಾಗಿ ಮರದ ಕೊಂಬೆ ಕಡಿದು ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೂರ್ನಾಡು ಚೆಸ್ಕಾಂ ಅಭಿಯಂತರ ತೇಜ ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಕಡಂಗ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು, ಪೊಲೀಸ್ ಸಿಬ್ಬಂದಿ ಅಥವಾ ಹೋಂ ಗಾರ್ಡ್ಗಳನ್ನು ಟ್ರಾಫಿಕ್ ಸಮಸ್ಯೆ ಪರಿಹರಿಸಲು ನೇಮಿಸಬೇಕು. ಪೊಲೀಸ್ ಬೀಟ್ ಸಂಚಾರ ಹೆಚ್ಚಿಸಬೇಕು ಎಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೀರಾಜಪೇಟೆ ಸಹಾಯಕ ಪೊಲೀಸ್ ಬಿ.ಕೆ. ಮೋಹನ್ ವಾಹನ ನಿಲುಗಡೆಗೆ ತಿಂಗಳಲ್ಲಿ ೧೫ ದಿನ ಒಂದು ಬದಿಯಲ್ಲಿ ಉಳಿದ ೧೫ ದಿನ ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆ ಮಾಡುವಂತೆ ಹಾಗೂ ಎಲ್ಲಾ ದಿನ ಬೀಟ್ ಪೊಲೀಸ್ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಮಾದಕ ವಸ್ತು ಬಳಕೆ ಮಾಡುವ, ಅಥವಾ ಇನ್ನಾವುದೇ ಅಪರಾಧ ಪ್ರಕರಣ ಕಂಡರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.

ಚೆಯ್ಯAಡಾಣೆ ಪ್ರಾಥಮಿಕ ಶಾಲೆಯ ದುಸ್ಥಿತಿ ಬಗ್ಗೆ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಉಷಾ ಮಾತನಾಡಿ ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಅನುಮತಿ ದೊರೆಯಲು ಪ್ರಯತ್ನಿಸಲಾಗುವುದು ಎಂದರು.

ಅರಣ್ಯ ಇಲಾಖೆಯ ಬಗ್ಗೆ ಅರಣ್ಯಧಿಕಾರಿ ಮಾಲ್ತೇಶ್, ಆರೋಗ್ಯ ಇಲಾಖೆಯ ಬಗ್ಗೆ ಕನಕಾವತಿ, ಕೃಷಿ ಇಲಾಖೆಯ ಬಗ್ಗೆ ನಾರಾಯಣ ರೆಡ್ಡಿ, ತೋಟಗಾರಿಕೆ ಇಲಾಖೆಯ ಬಗ್ಗೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಗ್ಗೆ ಶೀಲಾ, ಆರಕ್ಷಕ ಇಲಾಖೆಯ ಬಗ್ಗೆ ನಾಪೋಕ್ಲು ಠಾಣೆಯ ಎಎಸ್‌ಐ ಗೋಪಾಲ ಕೃಷ್ಣ, ಪಶುಪಾಲನಾ ಇಲಾಖೆಯ ಗುರುರಾಜ್, ಆರೋಗ್ಯ ಯೋಜನೆಯ ಬಗ್ಗೆ ಸಂಯೋಜಕಿ ಶೋಭಾ, ಇಲಾಖೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.