ಸಿದ್ದಾಪುರ, ಜ. ೨೪: ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯೋರ್ವರು ದುರ್ಮರಣ ಹೊಂದಿರುವ ಘಟನೆ ಅಮ್ಮತ್ತಿ ಸಮೀಪದ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ಸಂಜೆ ಸಂಭವಿಸಿದೆ.

ಹೊಸೂರು ಬೆಟ್ಟಗೇರಿ ಗ್ರಾಮದ ನಿವಾಸಿ ಎಂ. ರತನ್ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಬೇಬಿ (೫೨) ಎಂಬವರೇ ಮೃತ ದುರ್ದೈವಿ. ತೋಟದೊಳಗೆ ಕಾಫಿ ಕೊಯ್ಲು ಕೆಲಸ ಮುಗಿಸಿಕೊಂಡು ಸಂಜೆ ಕಾಫಿ ತರುತ್ತಿದ್ದ ಸಂದರ್ಭ ತೋಟದೊಳಗಿನಿಂದ ಹಠಾತ್ತನೇ ಕಾಡಾನೆ ದಾಳಿ ಮಾಡಿ ಕಾರ್ಮಿಕ ಮಹಿಳೆಯ ಹೊಟ್ಟೆ ಹಾಗೂ ಸೊಂಟಕ್ಕೆ ತುಳಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆ ಕಿರುಚಿಕೊಂಡಾಗ ಇತರ ಕಾರ್ಮಿಕರು ಓಡಿ ಹೋಗಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಮೃತ ಮಹಿಳೆಗೆ ಪತಿ ಹಾಗೂ ಐವರು ಮಕ್ಕಳಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸೂರು ಬೆಟ್ಟಗೇರಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಕಾರ್ಮಿಕ ಮುಖಂಡ ಮಹದೇವ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕಳೆದ ಎರಡು ವಾರಗಳ ಅಂತರದಲ್ಲಿ ಸಿದ್ದಾಪುರ ಭಾಗದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

(ಮೊದಲ ಪುಟದಿಂದ) ಇದೀಗ ಕಾರ್ಮಿಕ ಮಹಿಳೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಶಾಸಕರ ಭೇಟಿ : ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟ ಸ್ಥಳಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪರಿಹಾರವನ್ನು ಕೂಡಲೇ ನೀಡುವ ಬಗ್ಗೆ ಭರವಸೆ ನೀಡಿದರು. ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖಾಧಿಕಾರಿಗಳಿಗೆ ಇದೇ ಸಂದರ್ಭ ಸೂಚನೆ ನೀಡಿದರು. - ವರದಿ: ವಾಸು