ಸೋಮವಾರಪೇಟೆ, ಜ. ೨೪: ಈ ಬಾರಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಆಯ್ಕೆ ಸಂದರ್ಭ ಕೊಡಗಿಗೆ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯವನ್ನು ಪಕ್ಷದ ನಾಯಕರು ಭಾರತೀಯ ಜನತಾ ಪಾರ್ಟಿಯ ರಾಜ್ಯ ವರಿಷ್ಠರ ಮುಂದಿಟ್ಟಿದ್ದಾರೆ.
ಈಗಾಗಲೇ ನಡೆಸಿರುವ ಸರಣಿ ಸಭೆಗಳಲ್ಲಿ ಕೊಡಗಿಗೆ ಪ್ರಾತಿನಿಧ್ಯ ನೀಡ ಬೇಕೆಂಬ ಬೇಡಿಕೆಯನ್ನು ಬಲವಾಗಿ ಪ್ರತಿಪಾದಿಸುವ ಮೂಲಕ ಚುನಾವಣೆ ಘೋಷಣೆಗೂ ಮುನ್ನ ಮಾಜಿ ಶಾಸಕರುಗಳು ಚಟುವಟಿಕೆಗೆ ಇಳಿದಿದ್ದಾರೆ.
ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿಸಲ್ಪಟ್ಟಿದ್ದ ಕೊಡಗಿನಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿರುವುದನ್ನು ಇಂದಿಗೂ ಅರ್ಥೈಸಿಕೊಳ್ಳಲಾಗದ ಮುಖಂಡರು ಮತ್ತು ಮುಂಚೂಣಿ ಕಾರ್ಯಕರ್ತರು, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೊಡಗಿಗೆ ಅಧಿಕಾರ ಪಡೆಯುವ ಒತ್ತಾಸೆಯಲ್ಲಿದ್ದಾರೆ. ಇದರ ಪ್ರತಿಫಲನವಾಗಿ ಸಂಸತ್ ಚುನಾವಣಾ ಅಭ್ಯರ್ಥಿಯನ್ನಾಗಿ ಕೊಡಗಿನವರಿಗೆ ಟಿಕೇಟ್ ನೀಡಬೇಕೆಂಬ ಆಗ್ರಹವನ್ನು ಬಿಜೆಪಿ ರಾಜ್ಯವರಿಷ್ಠರ ಮೂಲಕ ಕೇಂದ್ರಕ್ಕೆ ರವಾನಿಸಿದ್ದಾರೆ.
ಈ ಹಿಂದೆ ಕೊಡಗು, ಕರ್ನಾಟಕದೊಂದಿಗೆ ವಿಲೀನವಾದ ನಂತರ ಪ್ರಥಮವಾಗಿ ೧೯೫೨ ರಿಂದ ೧೯೫೬ ರವರೆಗೆ ಸಂಸದರಾಗಿ ಕೊಡಗಿನ ಸಿ.ಎಂ. ಪೂಣಚ್ಚ ಅವರು ಆಯ್ಕೆಯಾಗಿದ್ದರು. ಅದಾದ ನಂತರ ಸಂಸತ್ನಲ್ಲಿ ಕೊಡಗು ಜಿಲ್ಲೆಯವರಿಗೆ ಪ್ರಾತಿನಿಧ್ಯ ನೀಡಿಲ್ಲ. ಮಂಗಳೂರು, ಮೈಸೂರು ಜಿಲ್ಲೆಯೊಂದಿಗೆ ಲೋಕಸಭಾ ಸ್ಥಾನವನ್ನು ಹಂಚಿಕೊAಡ ಮೇಲಂತೂ ಬಿಜೆಪಿಯಿಂದ ಇಲ್ಲಿನವರಿಗೆ ಪ್ರಾತಿನಿಧ್ಯ ನೀಡಿಲ್ಲ. ೩ ಬಾರಿ ಮೈಸೂರಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ಅದಕ್ಕೂ ಮುನ್ನ ಮಂಗಳೂರಿಗೆ ಅವಕಾಶ ಒದಗಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕೊಡಗಿನವರಿಗೆ ಅವಕಾಶ ನೀಡಬೇಕೆಂಬ ಒತ್ತಾಯವನ್ನು ವರಿಷ್ಠರ ಮುಂದಿಡಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ ಪ್ರಬಲ ಪೈಪೋಟಿ ನೀಡಿರುವ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆಯ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರುಗಳಲ್ಲಿ ಓರ್ವರಿಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಬೇಕು. ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಕೊಡಗಿನಿಂದ ಅತ್ಯಧಿಕ ಮತಗಳನ್ನು ಗಳಿಸಿಕೊಡಲಾಗಿದೆ. ಈ ಬಾರಿ ಇಲ್ಲಿನವರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.
ಇದಕ್ಕೆ ಪೂರಕವಾಗಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ರಾಜ್ಯ, ರಾಷ್ಟç ವರಿಷ್ಠರ ಮುಂದೆ ಅವಕಾಶ ಕೇಳಿದ್ದಾರೆ. ಒಟ್ಟಾರೆ ೧೯೫೨ರ ನಂತರ ಕೊಡಗಿನವರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಲು ಅವಕಾಶ ಲಭಿಸಲಿದೆಯೇ? ಎಂಬ ಪ್ರಶ್ನೆ ಮೂಡಿದೆ.
ಈ ಬಾರಿ ಕಾಂಗ್ರೆಸ್ನಿAದ ಕೊಡಗಿನವರಿಗೆ ಪ್ರಾತಿನಿದ್ಯದ ಬೇಡಿಕೆ ಸದ್ಯಕ್ಕೆ ಬಂದಿಲ್ಲ. ಇನ್ನು ಬಿಜೆಪಿಯೊಂದಿಗೆ ಮೈತ್ರಿಯಲ್ಲಿರುವ ಜೆಡಿಎಸ್ ಸಹ ಕೊಡಗಿನವರಿಗೆ ಟಿಕೆಟ್ ನೀಡುವ ಚಿಂತನೆ ನಡೆಸಿಲ್ಲ. ಬಿಜೆಪಿಯಿಂದ ಮಾತ್ರ ಇದೇ ಮೊದಲ ಬಾರಿಗೆ ಕೊಡಗಿನವರಿಗೆ ಲೋಕಸಭಾ ಸ್ಥಾನದ ಪ್ರಾತಿನಿಧ್ಯ ಎಂಬ ಬೇಡಿಕೆ ಮುನ್ನೆಲೆಗೆ ಬಂದಿದ್ದು, ಈರ್ವರು ಮಾಜಿ ಶಾಸಕರು ಈಗಾಗಲೇ ಚಟುವಟಿಕೆಗೆ ಇಳಿದಿದ್ದಾರೆ. ೧೯೫೬ರ ನಂತರ ಕೊಡಗಿನವರಿಗೆ ಸಂಸತ್ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ, ಸಂಸತ್ಗೆ ಆಯ್ಕೆಯಾಗುವ ಅವಕಾಶ ಲಭಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.