ಗೋಣಿಕೊಪ್ಪ ವರದಿ, ಜ. ೨೨: ಕೊಡಗು ಹಿಂದು ಮಲಯಾಳಿ ಫುಟ್ಬಾಲ್ ಅಸೋಸಿಯೇಷನ್, ಮರಗೋಡು ಕೊಡಗು ಹಿಂದು ಮಲಯಾಳಿ ಸಮಾಜ ಹಾಗೂ ಮಲಯಾಳಿ ಸಮಿತಿ ವತಿಯಿಂದ ತಾ.೨೬ ರಿಂದ ೨೮ ರವರೆಗೆ ಮಲೆಯಾಳಿ ಸಮುದಾಯದವರಿಗೆ ಮರಗೋಡು ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಗೌರವ ಅಧ್ಯಕ್ಷ ಶರತ್ಕಾಂತ್ ತಿಳಿಸಿದ್ದಾರೆ.
ವೀರಾಜಪೇಟೆ ಶ್ರೀ ಮುತ್ತಪ್ಪನ್ ಮಲಯಾಳಿ ಎಫ್ಸಿ, ಕೊಡಗು ಕಾರ್ಗಿಲ್ ಎಫ್ಸಿ, ಒಂಟಿಯAಗಡಿ ಶ್ರೀನಿಧಿ ಎಫ್ಸಿ, ಚೆನ್ನಯ್ಯನಕೋಟೆ ಚಾಲೆಂಜರ್ಸ್ ಎಫ್ಸಿ, ಮರಗೋಡು ಹಿಂದು ಮಲಯಾಳಿ ಎಫ್ಸಿ, ಗೋಣಿಕೊಪ್ಪ ಎಫ್ಸಿ, ಅಮ್ಮತ್ತಿ ಜೈ ಶ್ರೀರಾಮ್ ಮಲಯಾಳಿ ಹಾಗೂ ಅರೆಕಾಡು ಚಾಮುಂಡೇಶ್ವರಿ ಎಫ್ಸಿ ಸೇರಿದಂತೆ ಒಟ್ಟು ೮ ತಂಡಗಳು ಭಾಗವಹಿಸಲಿವೆ. ಈಗಾಗಲೇ ೭೨ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನರಂಜನೆ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಗೆ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ತಾ. ೨೮ ರಂದು ಸನ್ಮಾನ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಮುದಾಯದ ಪ್ರಮುಖರು, ಗಣ್ಯರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಪಂದ್ಯಾವಳಿ ಲಾಂಛನ ಅನಾವರಣಗೊಳಿಸಲಾಯಿತು. ಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ದರ್ಶನ್ ಸುಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ರತೀಶ್ಕುಮಾರ್, ಸಂಚಾಲಕ ವೇಣುಗೋಪಾಲ್ ಇದ್ದರು.