ಕೊಡ್ಲಿಪೇಟೆ, ಜ. ೨೨: ಕೊಡಗು ಜಿಲ್ಲೆಗೆ ಜನವರಿ ೨೫ ರಂದು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ. ಮಂಥರ್ ಗೌಡ ಮನವಿ ಮಾಡಿದರು.

ಕೊಡ್ಲಿಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಕೊಡ್ಲಿಪೇಟೆ, ಹಂಡ್ಲಿ, ಬ್ಯಾಡಗೊಟ್ಟ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಪೂರ್ವಭಾವಿ ಸಭೆ ಶನಿವಾರ ನಡೆಯಿತು. ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಶಾಸಕರು ಅಂದು ಮಧ್ಯಾಹ್ನ ೩ ಗಂಟೆಗೆ ಮಡಿಕೇರಿಯ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರು, ಅಭಿಮಾನಿಗಳನ್ನು ಕರೆದುಕೊಂಡು ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಮಂಥರ್ ಗೌಡ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಸಂದರ್ಭ ನೀಡಿದ್ದ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ.

ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಯಾವುದೇ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆ ಇಲ್ಲ. ಗಡಿ ಭಾಗವಾದ ಕೊಡ್ಲಿಪೇಟೆಯಲ್ಲಿ ಹೆಚ್ಚಿನ ಮತಗಳು ನಮಗೆ ಹಾಕಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ಮೈಸೂರಿನ ಡಾ. ಶೂಶ್ರುತ್ ಗೌಡ ಮಾತನಾಡಿ, ತಾನು ಕೂಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ನಾವೆಲ್ಲ ಶ್ರಮಿಸೋಣ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜನಾರ್ದನ್, ಚೇತನ್, ವಲಯಾಧ್ಯಕ್ಷ ಔರಂಗಜೇಬ್ ಅಧ್ಯಕ್ಷತೆ ವಹಿಸಿದರು. ವಲಯಾಧ್ಯಕ್ಷರುಗಳಾದ ಮಲ್ಲೇಶ್ ಬೆಸೂರು, ಸುಲೈಮಾನ್ ಬ್ಯಾಡಗೊಟ್ಟ, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಹನೀಫ್, ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಸನ್ನ, ಸದಸ್ಯ ತೇಜ್ ಕುಮಾರ್ ಜೆ.ಕೆ, ಪ್ರಮುಖರಾದ ಚೇತನ್, ಪಾವನ, ವೇದ್‌ಕುಮಾರ್, ಶೋಭಿತ್ ಗೌಡ, ವಹಾಬ್, ಧರ್ಮಣ್ಣ ಬೆಸೂರು, ಜಯಪ್ಪ ಕೆರಗನಹಳ್ಳಿ ಮತ್ತಿತರರು ಇದ್ದರು.