ಶ್ರೀಮಂಗಲ, ಜ. ೨೨: ಪೊನ್ನಂಪೇಟೆ ಮುಖ್ಯರಸ್ತೆ ಅಪ್ಪಚ್ಚ ಕವಿ ಶಾಲೆಯ ಸಮೀಪ ೧೧ ಕೆ.ವಿ.ವಿದ್ಯುತ್ ಮಾರ್ಗದ ಕಂಬಕ್ಕೆ ಕಾರು ಡಿಕ್ಕಿಯಾದ ಘಟನೆ ನಡೆದಿದ್ದು, ಚಾಲಕ ಹಾಗೂ ಸಹ ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯವಾಗಿದೆ.
ಕೇರಳ ರಾಜ್ಯಕ್ಕೆ ಸೇರಿದ ಮಾರುತಿ ಬೊಲೆನೋ ಕಾರು ಅತಿ ವೇಗದಲ್ಲಿ ಬಂದು ೧೧ ಕೆ.ವಿ ವಿದ್ಯುತ್ ಮಾರ್ಗದ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ತೀವ್ರ ಹಾನಿಯಾಗಿದ್ದು, ವಿದ್ಯುತ್ ಕಂಬ ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಾಲಕ ಹಾಗೂ ಸಹ ಪ್ರಯಾಣಿಕ ಸೀಟ್ ಬೆಲ್ಟ್ ಧರಿಸದೆ ಇದ್ದ ಕಾರಣ ಏರ್ ಬ್ಯಾಗ್ ತೆಗೆದುಕೊಂಡಿಲ್ಲ. ಕಾರಿನಿಂದ ಹೊರ ಬಂದ ಸಹ ಪ್ರಯಾಣಿಕ ಹಾಗೂ ಚಾಲಕ ಸಾರ್ವಜನಿಕರಿಗೆ ಕಾರು ಯಾರದ್ದೆಂದು ಗೊತ್ತಾಗಬಾರದೆಂದು ವಾಹನದ ನಂಬರ್ ಪ್ಲೇಟ್ ಕಿತ್ತುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಶಾಲಾ ವಠಾರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅತೀವೇಗದ ಚಾಲನೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.