ಶನಿವಾರಸಂತೆ, ಜ. ೨೧: ಇಲ್ಲಿನ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೭ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಸಂಸ್ಥೆಯ ಹಿರಿಯ ತರಬೇತುದಾರ ಎನ್.ಎಸ್. ಅರುಣ್ ಮತ್ತು ತಂಡ ಜಯಗಳಿಸಿದರು. ಮತ್ತೋರ್ವ ಹಿರಿಯ ತರಬೇತುದಾರ ಸಂಕೇತ್ ತಂಡ ರನ್ನರ್ ಪ್ರಶಸ್ತಿ ಪಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಎಂ.ಡಿ. ಯೋಗಾನಂದ್ ವಹಿಸಿದ್ದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ನಾಡಕಚೇರಿಯ ನಿಡ್ತ ವೃತ್ತ ಗ್ರಾಮ ಆಡಳಿತಾಧಿಕಾರಿ ಎಸ್.ಎ.ಅಬ್ದುಲ್ ರಜಾಕ್, ಕುಶಾಲನಗರ ಉಪ ನೋಂದಾವಣೆ ಕಚೇರಿ ನೌಕರ ಎಸ್.ವಿ. ಸಚಿನ್, ನಂಜನಗೂಡು ಪೊಲೀಸ್ ಇಲಾಖೆಯ ಎಸ್.ಜೆ. ಶರಿಂತಾಜ್, ಮಡಿಕೇರಿ ಪೊಲೀಸ್ ಇಲಾಖೆಯ ಸಲಾವುದ್ದೀನ್ ಹಾಗೂ ಕೊಣನೂರು ಅಂಚೆ ಇಲಾಖೆಯ ಅಶ್ವಿತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯೋಗ ಮತ್ತು ಕರಾಟೆ ಅಭ್ಯಾಸದ ಮಹತ್ವ ಹಾಗೂ ಅದರ ಕಲಿಯುವಿಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಂಸ್ಥೆ ಅಧ್ಯಕ್ಷ ಎನ್.ಎಸ್. ಅರುಣ್, ಉಪಾಧ್ಯಕ್ಷ ಚಂದ್ರು, ಕಾರ್ಯದರ್ಶಿ ಪಳನಿ, ಪದಾಧಿಕಾರಿಗಳಾದ ವಿನಯ್, ಸಂಜಯ್, ಗಣೇಶ್ ಪ್ರಸಾದ್, ಪ್ರಮೋದ್, ಸಂಕೇತ್, ಯೋಗೇಶ್, ಬ್ಲಾಕ್ ಬೆಲ್ಟ್ ವಿಜೇತರು, ಇತರರು ಹಾಜರಿದ್ದರು.