ರಾಮ ಮಂದಿರ ಉದ್ಘಾಟನೆ: ಸರ್ಕಾರಿ ರಜೆ ಇಲ್ಲ - ಸಿದ್ದರಾಮಯ್ಯ
ತುಮಕೂರು, ಜ. ೨೧: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ತಾ. ೨೨ರಂದು (ಇಂದು) ನಡೆಯಲಿದೆ. ಆದರೆ ಕರ್ನಾಟಕದಲ್ಲಿ ತಾ. ೨೨ರಂದು ಸರ್ಕಾರಿ ರಜೆ ಘೋಷಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತುಮಕೂರಿನಲ್ಲಿ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ರಜೆ ಘೋಷಿಸಬೇಕು ಎಂದು ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಾ. ೨೨ರಂದು ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೈರಾಮ್ ರಮೇಶ್ ಕಾರಿನ ಮೇಲೆ ದಾಳಿ : ಕಾಂಗ್ರೆಸ್ ಕಿಡಿ
ಗುವಾಹತಿ, ಜ. ೨೧: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯಯಾತ್ರೆಯ ವೇಳೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆ ಭಾನುವಾರ ಎರಡನೇ ಬಾರಿಗೆ ಅಸ್ಸಾಂಗೆ ಕಾಲಿಟ್ಟಿದೆ. ಬಿಸ್ವಂತ್ ಜಿಲ್ಲೆಯಿಂದ ಸೋನಿತ್ಪುರ ಮೂಲಕ ನಗಾಂವ್ಗೆ ಪ್ರಯಾಣ ಬೆಳೆಸುತ್ತಿದೆ. ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಭಾನುವಾರ ಪಕ್ಷದ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿ ಬೆಂಬಲಿಗರ ಗುಂಪು ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಸ್ವತಃ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಟ್ವಿಟರ್'ನಲ್ಲಿ ವೀಡಿಯೋ ಸಮೇತ ವಿವರಣೆ ನೀಡಿದ್ದಾರೆ. ಜಮುಗುರಿಘಾಟ್ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ. ಕಾರಿನ ವಿಂಡ್ಶೀಲ್ಡ್ನಿAದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸ್ಟಿಕ್ಕರ್ಗಳನ್ನು ಹರಿದು ಹಾಕಲಾಗಿದೆ. ನೀರನ್ನು ಎಸೆದು ನ್ಯಾಯ ಯಾತ್ರೆಯ ವಿರುದ್ಧ ಘೋಷಣೆ ಕೂಗಲಾಗಿದೆ. ಆದರೆ ನಾವು ಸಂಯಮವನ್ನು ಕಾಪಾಡಿಕೊಂಡೆವು. ನಿಸ್ಸಂಶವಾಗಿಯೂ ಈ ಕೃತ್ಯದ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈವಾಡ ಅಡಗಿದೆ ಎಂದು ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸದಂತೆ ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಮ ಮಂದಿರ ಸ್ಫೋಟಿಸುವ ಬೆದರಿಕೆ: ಬಿಹಾರದ ವ್ಯಕ್ತಿ ಬಂಧನ
ಪಾಟ್ನಾ, ಜ. ೨೧: ಸೋಮವಾರ ಉದ್ಘಾಟನೆಯಾಗುತ್ತಿರುವ ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಿಹಾರ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಗುಲವನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಕ್ಕಾಗಿ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ೨೧ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಶನಿವಾರ ತಡರಾತ್ರಿ ಪಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್ನಲ್ಲಿರುವ ತನ್ನ ಮನೆಯಿಂದಲೇ ಕರೆ ಮಾಡಿದ ಇಂತೆಖಾಬ್ ಆಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಅರಾರಿಯಾದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, "ಆ ವ್ಯಕ್ತಿ ತಾ. ೧೯ ರಂದು ನಾಗರಿಕರು ತುರ್ತು ಸಹಾಯವನ್ನು ಪಡೆಯಬಹುದಾದ ೧೧೨ ಗೆ ಡಯಲ್ ಮಾಡಿದ್ದರು. ಅವನು ತನ್ನ ಹೆಸರು ಛೋಟಾ ಶಕೀಲ್ ಮತ್ತು ತಾನು ದಾವೂದ್ ಇಬ್ರಾಹಿಂನ ಆಪ್ತ ಎಂದು ಹೇಳಿಕೊಂಡಿದ್ದ. ತಾ.೨೨ ರಂದು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಆಲಂ ಫೋನ್ನಲ್ಲಿ ಹೇಳಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ. ಆರೋಪಿ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ, ಆದರೆ ಮಾನಸಿಕವಾಗಿ ಅಸ್ಥಿರನಾಗಿದ್ದಾನೆ" ಎಂದು ಎಸ್ಪಿ ಸಿಂಗ್ ಹೇಳಿದರು. ಸಮಸ್ಯೆಯ ಸೂಕ್ಷ್ಮತೆಯ ದೃಷ್ಟಿಯಿಂದ ಪಲಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಮೊಬೈಲ್ ಫೋನ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆ: ರಜೆ ಘೋಷಿಸಿದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ
ಶಿಮ್ಲಾ, ಜ. ೨೧: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ಗೆ ತನ್ನದೇ ಪಕ್ಷದ ಸರ್ಕಾರ ಶಾಕ್ ನೀಡಿದ್ದು, ತಾ. ೨೨ರಂದು (ಇಂದು) ರಜೆ ಘೋಷಣೆ ಮಾಡಿದೆ. ಹೌದು.. ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿರುವ ತಾ. ೨೨ (ಇಂದು) ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಭಾನುವಾರ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ದೃಷ್ಟಿಯಿಂದ ಸಾರ್ವಜನಿಕ ರಜೆ ಘೋಷಿಸಿದ್ದಾರೆ. ಇಂದು ಶಿಮ್ಲಾದ ರಾಮ ಮಂದಿರಕ್ಕೆ ಭೇಟಿ ನೀಡಿದ್ದ ಸಿಎಂ ಸುಖು ಅವರು ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಮನೆಯಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿದರು. ಅಂತೆಯೇ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಕೇಂದ್ರ ಸರ್ಕಾರ ತಾ. ೨೨ ರಂದು ಅರ್ಧ ದಿನ ರಜೆ ಘೋಷಿಸಿದೆ. ಆದರೆ ನಾವು ಪೂರ್ಣ ದಿನದ ರಜೆ ಘೋಷಿಸುತ್ತಿದ್ದೇವೆ. ನಾನು ನನ್ನ ಮನೆಯಲ್ಲಿ ದೀಪವನ್ನು ಬೆಳಗಿಸುತ್ತೇನೆ ಮತ್ತು ಅದೇ ರೀತಿ ಮಾಡಲು ಇತರರನ್ನು ಪ್ರೋತ್ಸಾಹಿಸುತ್ತೇನೆ. ನಾನು ಶೀಘ್ರದಲ್ಲೇ ಅಯೋಧ್ಯೆಯ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಅಲ್ಲದೆ ಜಖುವಿನಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಅವರು ದೇವಸ್ಥಾನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ- ಸಿಎಂ.
ತುಮಕೂರು, ಜ. ೨೧: ಡಾ. ಶಿವಕುಮಾರ ಸ್ವಾಮೀಜಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ 'ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕ ರತ್ನ, ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ "ಸ್ಮೃತಿ ವನ" ಉದ್ಘಾಟಿಸಿ, ಶ್ರೀಗಳ ೫ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳಿಗೆ ಭಾರತ ರತ್ನ ನೀಡಬೇಕು. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು. ೧೨ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತವಾಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ.ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ ಎಂದರು.